ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಎರಡು ಕಾಡಾನೆಗಳು ಇಡೀ ರಾತ್ರಿ ಸಾರ್ವಜನಿಕರ ನಿದ್ದೆಗೆಡಿಸಿದ ಘಟನೆ ನಡೆದಿದೆ. ಆನೆಗಳ ದಿಢೀರ್ ಎಂಟ್ರಿಯಿಂದಾಗಿ ಪಟ್ಟಣದ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೇಟ್ ಮುರಿದು ಒಳ ನುಗ್ಗಿದ ಕಾಡಾನೆಗಳು, ಬಳಿಕ ಹಲವು ಮನೆಗಳ ಗೇಟ್‌ಗಳನ್ನು ಧ್ವಂಸಗೊಳಿಸಿ ಅಂಗಳಕ್ಕೆ ನುಗ್ಗಲು ಯತ್ನಿಸಿವೆ. ಕಾಡಾನೆಗಳ ಅಬ್ಬರ ಮತ್ತು ಓಡಾಟದಿಂದಾಗಿ ಆಲ್ದೂರು ಗ್ರಾಮಸ್ಥರು ಭಯಭೀತರಾಗಿ ಇಡೀ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಜಾಗರಣೆ ಮಾಡುವಂತಾಯಿತು.

ಆನೆಗಳ ಹಾವಳಿಯ ಕುರಿತು ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿಯೇ ಕಾರ್ಯಾಚರಣೆಗೆ ಇಳಿದ ಆಲ್ದೂರು ಅರಣ್ಯ ಸಿಬ್ಬಂದಿಗಳು ಸತತ ಪರಿಶ್ರಮದ ನಂತರ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.














