ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಜನರ ಅಪಾರ ಪ್ರೀತಿ ಹಾಗೂ ವಿಶ್ವಾಸ ಗಳಿಸಿರುವ ವೈದ್ಯ ಡಾ. ಇಕ್ಲಾಸ್ ಅಹ್ಮದ್ ಅವರನ್ನು ಬೇಲೂರು ತಾಲ್ಲೂಕಿನ ಅಣಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.
ಬಣಕಲ್ ಹಾಗೂ ಬೆಟ್ಟಗೆರೆ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಸಮಯಪಾಲನೆ, ಉತ್ತಮ ಚಿಕಿತ್ಸಾ ಸೇವೆ ಹಾಗೂ ರೋಗಿಗಳೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣಗಳಿಂದ ಜನಪ್ರಿಯರಾಗಿದ್ದರು. ಅವರ ಚಿಕಿತ್ಸೆಯ ಮೇಲೆ ಜನರು ಅಪಾರ ನಂಬಿಕೆ ಇಟ್ಟಿದ್ದು, ಸ್ಥಳೀಯರಷ್ಟೇ ಅಲ್ಲದೆ ಸುತ್ತಮುತ್ತಲಿನ ವಿವಿಧ ಹೋಬಳಿ ಹಾಗೂ ಗ್ರಾಮಗಳಿಂದಲೂ ದಿನಕ್ಕೆ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದರು.

ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಇದ್ದ ನಿರಾಸಕ್ತಿಯನ್ನು ದೂರ ಮಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯ ಸೇವೆ ಪಡೆಯುವಂತೆ ಮಾಡುವಲ್ಲಿ ಡಾ. ಇಕ್ಲಾಸ್ ಅಹ್ಮದ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಅವರ ವರ್ಗಾವಣೆಯಿಂದ ಬಣಕಲ್, ಬೆಟ್ಟಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಆರೋಗ್ಯ ಸೇವೆಯಲ್ಲಿ ಹಿನ್ನಡೆಯಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕ ಮುಖಂಡರು ಹಾಗೂ ಗ್ರಾಮಸ್ಥರು ವರ್ಗಾವಣೆ ಆದೇಶವನ್ನು ಮರುಪರಿಶೀಲಿಸಿ, ಡಾ. ಇಕ್ಲಾಸ್ ಅಹ್ಮದ್ ಅವರನ್ನು ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಮುಂದುವರಿಸಲು ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)














