1008 ರೈತ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯು, ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠದ ಸಹಾಯದಿಂದ ನಡೆಸಿದ ಈ ಕಾರ್ಯಕ್ರಮವು ಧಾರ್ಮಿಕತೆ ಮತ್ತು ಸಂಸ್ಕೃತಿಯ ಸಮನ್ವಯದ ಮಾದರಿಯಾಯಿತು.
ಇದನ್ನೂ ಓದಿ: ಏರ್ಟೆಲ್, ಜಿಯೋ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ?; ಜನಪ್ರಿಯ ಯೋಜನೆಗಳು ಸಹ ದುಬಾರಿ

ವಿಡಿಯೋ ಮಾಧ್ಯಮದ ಮೂಲಕ ಆಶೀರ್ವಚನ ನೀಡಿದ ಶ್ರೀ ಶ್ರೀ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳು “ರೈತರ ಸಾಮೂಹಿಕ ಕಲ್ಯಾಣಕ್ಕಾಗಿ ಇಂತಹ ಅಪೂರ್ವ ಕಾರ್ಯಕ್ರಮ ನಡೆದಿರುವುದು ಬಹಳ ಸಂತೋಷದ ವಿಷಯ. ಕಷ್ಟದಲ್ಲಿದ್ದ ಅನೇಕ ರೈತರ ವಿವಾಹವು ಶ್ರದ್ಧೆಯಿಂದ ನೆರವೇರಿದೆ. ವಿವಾಹವು ನಮ್ಮ ಧರ್ಮಪರಂಪರೆಯಲ್ಲಿ ಅತ್ಯಂತ ಮಹತ್ವದ ಸಂಸ್ಕಾರ. ಮಾನವನ ಬುದ್ಧಿಯೇ ಅವನ ಮಹಾ ಶಕ್ತಿ, ಅದನ್ನು ಧಾರ್ಮಿಕ ಆಚರಣೆಯಲ್ಲಿ ಬಳಸಿದಾಗಲೇ ಶ್ರೇಯಸ್ಸು ದೊರಕುತ್ತದೆ. ದಂಪತಿಗಳು ಕಷ್ಟ-ಸುಖಗಳನ್ನು ಹಂಚಿಕೊಂಡು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹೊಸ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ ಎಲ್ಲಾ ಜೋಡಿಗಳಿಗೆ, ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಹಾಗೂ ಶ್ರೀ ಶಾರದಾಂಬೆಯ ಪರಿಪೂರ್ಣ ಅನುಗ್ರಹ ಇರಲಿ” ಎಂದು ಅನುಗ್ರಹಿಸಿದರು.
ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ, ಉಭಯ ಜಗದ್ಗುರುಗಳ, ಶಾರದಾಂಬೆಯ ಆಶೀರ್ವಾದವನ್ನು ಪ್ರಸಾದದ ಮೂಲಕ ನಮಗೆ ತಲುಪಿಸಿದ ವೇದಬ್ರಹ್ಮ ಶ್ರೀ ಕೃಷ್ಣಭಟ್ಟರು ಹಾಗೂ ವೇದಬ್ರಹ್ಮ ಶ್ರೀ ಶಮಂತ ಭಟ್ಟರಿಗೆ ಧನ್ಯವಾದ ಸಲ್ಲಿಸಿದರು. ಇಂದೊಂದು ಅಭೂತಪೂರ್ವವಾದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿ ಆರಂಭದ ಹಂತದಿಂದ ಅಂತಿಮ ಕ್ಷಣವರೆಗೂ ಸಂಪೂರ್ಣ ಬೆಂಬಲ ನೀಡಿ ಇರುತ್ತದೆ. ವಿಶಾಲ ಪಂಡಲ್, ವೈದಿಕ ವಿಧಿವಿಧಾನಗಳು, ಹೊಸ ಬಟ್ಟೆಗಳು, ಅಗತ್ಯವಾದ ಪಾತ್ರೆಗಳ ಸಂಪೂರ್ಣ ಸೆಟ್, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುವ ರೈತರ ಪ್ರಯಾಣ ವೆಚ್ಚವನ್ನೂ ಸೇರಿದಂತೆ ಅನೇಕ ವ್ಯವಸ್ಥೆಗಳ ವೆಚ್ಚವನ್ನು ಭರಿಸಿದ ಶಾರದಾಪೀಠಕ್ಕೆ ಅನಂತ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದರು.
ವಿವಾಹ ಕಾರ್ಯಕ್ರಮವು ಲಕ್ಷ್ಮೀಶ ತಂತ್ರಿಗಳ ಸಾನಿಧ್ಯದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಪವಿತ್ರ ಲಕ್ಷ್ಮೀನಾರಾಯಣ ಹೃದಯ ಹೋಮವನ್ನು ನೆರವೇರಿಸಲಾಯಿತು.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ ನೋಂದಣಿ ಪ್ರಾರಂಭ; ಏನಿದು ಪರೀಕ್ಷಾ ಪೇ ಚರ್ಚಾ
ಸಭೆಯನ್ನುದ್ದೇಶಿಸಿ ಮಾತನಾಡಿದ ಧಾರವಾಡದ ವಾಚಸ್ಪತಿ ಶಾಸ್ತ್ರಿಗಳು, ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ನಮ್ಮದೇ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಸಂಸ್ಕಾರವೆಂದರೆ ದೋಷಗಳನ್ನು ತೆಗೆಯುವುದು ಹಾಗೂ ಹೊಸ ಗುಣಗಳನ್ನು ಸ್ವೀಕರಿಸುವುದು. ವಿವಾಹ ಸಂಸ್ಕಾರವು ಧರ್ಮಾಚರಣೆಗೂ, ಉತ್ತಮ ಸಂತತಿಗೂ ದಾರಿ ಮಾಡಿಕೊಡುತ್ತದೆ. ಪುರುಷರು-ಸ್ತ್ರೀಯರು ತಮಗೆ ವಹಿಸಲಾದ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ನವ ಜೋಡಿಗಳಿಗೆ ಒತ್ತಿ ಹೇಳಿದರು.
ನಂತರ ಮಾತನಾಡಿದ ವಾಸುದೇವ ಜೋಯಿಸರು, ಶ್ರೀ ಶಂಕರಾಚಾರ್ಯರು ಸನಾತನ ಧರ್ಮದ ರಕ್ಷಣೆಗೆ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ಅವರು ಸ್ಥಾಪಿಸಿದ ಮೊದಲನೆಯ ಪೀಠವೇ ದಕ್ಷಿಣಾಮ್ನಾಯ ಶೃಂಗೇರಿ ಪೀಠ ಎಂದು ಹೇಳುತ್ತಾ ಶೃಂಗೇರಿಯ ಮಹತ್ವವನ್ನು ತಿಳಿಸಿದರು.
ವೇದಬ್ರಹ್ಮ ಶ್ರೀ ಕೆ.ಎಲ್. ಶ್ರೀನಿವಾಸ ಅವರು ಧರ್ಮಾಚರಣೆಯ ಮಹತ್ವವನ್ನು ಹೇಳುತ್ತಾ ಧರ್ಮಾಚರಣೆಯಿಂದ ಸುಖಪ್ರಾಪ್ತಿ, ಅಧರ್ಮಾಚರಣೆಗಳಿಂದ ದುಃಖಪ್ರಾಪ್ತಿ. ಶೃಂಗೇರಿಯ 36ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಅನುಗ್ರಹದಿಂದ, ಅವರ ಉತ್ತರಾಧಿಕಾರಿಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರು ನಮ್ಮನ್ನು ಧರ್ಮಪರವಾದ ಜೀವನದತ್ತ ಮುನ್ನಡೆಸುತ್ತಿದ್ದಾರೆ ಎಂದು ಶೃಂಗೇರಿ ಗುರುಪರಂಪರೆಯ ಮಹತ್ವವನ್ನು ಸಾರಿದರು.
ಶೃಂಗೇರಿಯಿಂದ ಆಗಮಿಸಿದ ವೇದಬ್ರಹ್ಮ ಶ್ರೀ ಕೃಷ್ಣ ಭಟ್ಟರು ಮತ್ತು ವೇದಬ್ರಹ್ಮ ಶ್ರೀ ಶಮಂತ ಭಟ್ಟರು ಕಾರ್ಯಕ್ರಮದಲ್ಲಿ ಹಾಜರಿದ್ದು, ಜಗನ್ಮಾತೆ ಶ್ರೀ ಶಾರದಾಂಬೆಯ ಹಾಗೂ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದಗಳನ್ನು ಎಲ್ಲಾ ಹೊಸದಾಗಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ ರೈತ ಜೋಡಿಗಳಿಗೆ ಅರ್ಪಿಸಿದರು.












