ಮೂಡಿಗೆರೆ: ವನ್ಯಜೀವಿ ಪರಿಸರದಲ್ಲಿ ಹತೋಟಿಗೆ ಬಂದ ಬೆಂಕಿ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಣಿಜರಿ, ಶಾಂತಿಗುಡ್ಡೆ, ಬಲ್ಲಾಳರಾಯನ ದುರ್ಗ, ಬಂಡಾಜೆ ಫಾಲ್ಸ್ ಮತ್ತು ಸುತ್ತಲ ಪರಿಸರದಲ್ಲಿ ಶುಕ್ರವಾರ ಕಂಡುಬಂದಿದ್ದ ಭಾರೀ ಪ್ರಮಾಣದ ಬೆಂಕಿ ಶನಿವಾರ ಸಂಜೆ ವೇಳೆಗೆ ಹತೋಟಿಗೆ ಬಂದಿದೆ.


ಇದನ್ನೂ ಓದಿ: ಮಾರುಕಟ್ಟೆಗೆ ಬಂದಿದೆ ನಕಲಿ ಕಲ್ಲಂಗಡಿ ಹಣ್ಣು!; ಹೀಗೆ ಪತ್ತೆ ಹಚ್ಚಿ…


ಇಲ್ಲಿನ ಹುಲ್ಲುಗಾವಲು, ಕಣಿವೆ ಹಾಗೂ ತಡೆಗೋಡೆಗಳ ಪ್ರದೇಶದಲ್ಲಿ ವ್ಯಾಪಕ ಬೆಂಕಿ ಕಂಡುಬಂದಿದ್ದು, ಶುಕ್ರವಾರ ರಾತ್ರಿ ಇಲ್ಲಿಂದ ಹಲವು ಕಿಮೀ ದೂರದವರೆಗೂ ಹುಲ್ಲುಗಾವಲು ಉರಿಯುವುದು ಕಂಡುಬಂದಿತ್ತು.

ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್.ಎಫ್.ಒ ಶರ್ಮಿಷ್ಠಾ, ಡಿ.ಆರ್‌.ಎಫ್‌.ಒ ರಂಜಿತ್ ಅವರ ತಂಡ ರಾತ್ರಿಯೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಧ್ಯರಾತ್ರಿ 2 ಗಂಟೆ ತನಕ ಮುನ್ನೆಚ್ಚರಿಕೆ ವಹಿಸಿದ್ದರು.

ಶನಿವಾರ ಬೆಳಿಗ್ಗೆ ಕಾರ್ಯಾಚರಣೆಗೆ ಒಂದು ತಂಡ ದಿಡುಪೆ- ಎಳನೀರಿನ ಮೂಲಕ ಬೆಂಕಿ ಬಿದ್ದ ಪ್ರದೇಶಕ್ಕೆ ತೆರಳಿದರೆ ಇನ್ನೊಂದು ತಂಡ ಕಡಿರುದ್ಯಾವರದ ಮೂಲಕ 8 ಕಿಮೀ ಕಾಲ್ನಡಿಗೆಯಲ್ಲಿ ಕ್ರಮಿಸಿ ಬಂಡಾಜೆ ಫಾಲ್ಸ್ ಪ್ರದೇಶಕ್ಕೆ ತೆರಳಿ ಬೆಂಕಿ ಇನ್ನಷ್ಟು ಹರಡದಂತೆ ಸಂಜೆವರೆಗೂ ಕಾರ್ಯಾಚರಣೆ ನಡೆಸಿತು.


ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಲ್ಲಿ ತರಬೇತಿಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?


ಅತ್ಯಂತ ಜಟಿಲ ಪ್ರದೇಶವಾದ ಇಲ್ಲಿ ಕಾರ್ಯಾಚರಣೆ ನಡೆಸುವುದು ಸವಾಲಾಗಿದೆ. ಕಣಿವೆ, ಬೆಟ್ಟ, ತಡೆಗೋಡೆ ಪ್ರದೇಶಕ್ಕೆ ತೆರಳಲು ಸಾಧ್ಯವಿಲ್ಲ. ಇಲಾಖೆ ಬೆಂಕಿ ರೇಖೆ ರಚಿಸಿರುವ ಕಾರಣ ಬೆಂಕಿ ಕಾಡಿನ ಭಾಗವನ್ನು ಪ್ರವೇಶಿಸಿಲ್ಲ. ಅಗ್ನಿಶಾಮಕ ದಳ ಸಹಿತ ಯಾವುದೇ ವಾಹನಗಳು ತೆರಳದ ಈ ಪ್ರದೇಶದಲ್ಲಿ ಹಲವು ಕಿ.ಮೀ ದೂರವನ್ನು ಕಾಲ್ನಡಿಗೆ ಮೂಲಕವೇ ಕ್ರಮಿಸಬೇಕಿದೆ.

ಕಿಡಿಗೇಡಿಗಳಿಗೆ ಆಟ, ಇಲಾಖೆಗೆ ಸಂಕಟ:
ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆಯುತ್ತಿರುವುದು ಇಲಾಖೆಗೆ ಸಂಕಟವನ್ನು ತರುತ್ತಿದೆ. ಒಂದೆಡೆ ಉಂಟಾದ ಬೆಂಕಿ ಸದ್ಯ ಬಿಸಿಲು ಮತ್ತು ಲಘುವಾದ ಗಾಳಿ ಇರುವ ಪರಿಣಾಮ ಭಾರಿ ವೇಗವಾಗಿ ಪಸರಿಸುತ್ತದೆ. ಬೆಂಕಿಯನ್ನು ಆರಿಸಲು ಇಲಾಖೆ ಹರಸಾಹಸ ಪಡಬೇಕಿದೆ. ಇಲಾಖೆಯಲ್ಲಿ ಸರಿಯಾದ ಉಪಕರಣಗಳು, ವ್ಯವಸ್ಥೆಗಳು, ಹೆಚ್ಚಿನ ಸಿಬ್ಬಂದಿಯೂ ಇಲ್ಲದ ಕಾರಣ ಇರುವ ಸಿಬ್ಬಂದಿ ಹೈರಾಣರಾಗುತ್ತಿದ್ದಾರೆ. ಪ್ರಖರ ಬಿಸಿಲು ಕೂಡ ತ್ವರಿತ ಕಾರ್ಯಾಚರಣೆಗೆ ಅಡ್ಡಿ ನೀಡುತ್ತಿದೆ.

“ಬೆಂಕಿ ಅರಣ್ಯ ಭಾಗವನ್ನು ಪ್ರವೇಶಿಸಿಲ್ಲ. ಹೆಚ್ಚಿನ ಪ್ರಮಾಣದ ಒಣ ಹುಲ್ಲಿಗೆ ಮಾತ್ರ ಪಸರಿಸಿದೆ. ಬೆಂಕಿ ಇನ್ನಷ್ಟು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ದೂರ ಪ್ರದೇಶದಲ್ಲಿ ಹೊಗೆಯು ಕಾಣುತ್ತಿದ್ದರೂ, ಅಪಾಯದ ಸ್ಥಿತಿ ಇಲ್ಲ- ಶರ್ಮಿಷ್ಠಾ, ಆರ್.ಎಫ್.ಒ, ವನ್ಯಜೀವಿ ವಿಭಾಗ, ಬೆಳ್ತಂಗಡಿ.

(ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ: ವಿಶ್ವದ ಮೊದಲ CNG ಸ್ಕೂಟರ್ ಬಿಡುಗಡೆಗೆ ಸಿದ್ದ; ಮೈಲೇಜ್ ಕೇಳಿ ಶಾಕ್‌ ಆದ ಜನ…


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.