ಕಡೂರು: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಕಸಬಾ ಹೋಬಳಿಯ ಬಳ್ಳೇಕೆರೆ ಗ್ರಾಮದ ಬಳಿ ಸೋಮವಾರ ಅಕ್ರಮವಾಗಿ ಪಡೆದಿದ್ದ ವಿದ್ಯುತ್ ವೈರ್‌ನಿಂದ ವಿದ್ಯುತ್ ಪ್ರವಹಿಸಿ ಪಕ್ಕದ ಜಮೀನಿನ ರೈತರೊಬ್ಬರು ಮೃತಪಟ್ಟಿದ್ದಾರೆ. ಮರಡೀಹಳ್ಳಿಯ ರೈತ ಹನುಮಂತಪ್ಪ (45) ಮೃತಪಟ್ಟವರು.
ಹನುಮಂತಪ್ಪ ಅವರು ಬಳ್ಳೇಕೆರೆಯ ಬಳಿ ಗುತ್ತಿಗೆ ಪಡೆದ ಜಮೀನಿಗೆ ಕೃಷಿ ಚಟುವಟಿಕೆಗೆಂದು ತೆರಳಿದ್ದರು. ಈ ವೇಳೆ ಜಮೀನಿನ ಬೇಲಿಗೆ ಹೊಂದಿ ಕೊಂಡು ಬೆಳೆದಿದ್ದ ಹಸಿ ಕಳೆ ಗಿಡಗಳನ್ನು ಕೀಳುವಾಗ ಪಕ್ಕದ ಜಮೀನಿನ ರೈತ ನಿರಂತರ ಜ್ಯೋತಿ ಮಾರ್ಗದಿಂದ ಅಕ್ರಮವಾಗಿ ಪಡೆದಿದ್ದ ವಿದ್ಯುತ್ ವೈರ್ ಹಾನಿಯಾಗಿ ತಂತಿ ಬೇಲಿ ಹಾಗೂ ಕಳೆಗಿಡಗಳಿಗೂ ವಿದ್ಯುತ್ ಪ್ರವಹಿಸಿದ್ದರಿಂದ ರೈತ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ಬಿಜೆಪಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಮತ್ತು ತೆಲುಗುಗೌಡ ಸಮಾಜದ ತಾಲ್ಲೂಕು ಕಾರ್ಯದರ್ಶಿ ರಾಜು ಎಂ.ಎನ್., ಜಿಗಣೆ ಹಳ್ಳಿ ಲೋಕೇಶ್ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ನೂರಾರು ರೈತರು ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಹನುಮಂತಪ್ಪ ಅವರು ಗುತ್ತಿಗೆಗೆ ಪಡೆದ ಜಮೀನಿನ ಪಕ್ಕದ ರೈತರೊಬ್ಬರು ಜಮೀನು ಇದ್ದು, ಅವರು ನಿರಂತರ ಜ್ಯೋತಿ ವಿದ್ಯುತ್ ಲೈನ್‌ನಿಂದ ಅಕ್ರಮವಾಗಿ ಸುಮಾರು ಒಂದೂವರೆ ಕಿ.ಮೀ. ದೂರದ ತಮ್ಮ ಜಮೀನಿಗೆ ಸಂಪರ್ಕ ಪಡೆದು ಕೊಳವೆಬಾವಿ ಮತ್ತು ಕೋಳಿ ಫಾರಂಗೆ ಬಳಸಿಕೊಳ್ಳುತ್ತಿದ್ದರು. ಅವರಿಗೆ ಮೆಸ್ಕಾಂನ ಜೂನಿಯರ್ ಎಂಜಿನಿಯರ್ ಒಬ್ಬರು ಸಂಬಂಧಿಕರಾಗಿದ್ದು, ಎಲ್ಲ ಗೊತ್ತಿದ್ದರೂ ಮೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು ಅದನ್ನು ಪ್ರಶ್ನಿಸುವ ಗೋಜಿಗೇ ಹೋಗಿಲ್ಲ ಎಂದು ಆರೋಪಿಸಿದರು.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಮೃತನ ಪತ್ನಿ ಹೃದ್ರೋಗಿಯಾಗಿದ್ದು, ಪುತ್ರನೂ ಚಿಕ್ಕವನಿದ್ದಾನೆ. ಕುಟುಂಬ ನಿರ್ವಹಣೆಯೂ ಕಷ್ಟವಿರುವುದರಿಂದ ₹25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಧ್ಯಾಹ್ನ 3.30ರ ಸುಮಾರಿಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಮೆಸ್ಕಾಂ ಸೂಪರಿಂಟೆಂಡಿಂಗ್ ಎಂಜಿನಿಯರ್ ಮಂಜುನಾಥ್, ಪ್ರತಿಭಟನಾ ನಿರತರೊಂದಿಗೆ ಮಾತುಕತೆಗೆ ಮುಂದಾಗುತ್ತಿದ್ದಂತೆ ಕಚೇರಿಯ ಮುಂಭಾಗದ ಗೇಟ್ ಬಂದ್ ಮಾಡಿದ ರೈತರು ನ್ಯಾಯ ಒದಗಿಸುವವರೆಗೆ ಬಾಗಿಲು ತೆರೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತರ ಪ್ರತಿನಿಧಿಗಳೊಂದಿಗೆ ಕಚೇರಿಯಲ್ಲಿ ಸುಮಾರು ಎರಡೂವರೆ ಗಂಟೆ ಮಾತುಕತೆ ನಡೆಸಿದ ಮಂಜುನಾಥ್, ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸಂಜೆಯ ನಂತರ ಮರಣೋತ್ತರ ಪರೀಕ್ಷೆ ಸಾಧ್ಯವಿಲ್ಲ. ಇಲಾಖೆಯಿಂದ ಏಕಾಏಕಿ ಪರಿಹಾರ ನೀಡಲು ಸಾಧ್ಯವಿಲ್ಲ. ಮೊದಲು ದೂರು ದಾಖಲಾಗಲಿ. ನಾವು ಇಲಾಖಾ ತನಿಖೆ ನಡೆಸಿದ ನಂತರ ವರದಿ ಆಧರಿಸಿ ಪರಿಹಾರ ಘೋಷಿಸುವುದಾಗಿ ಪ್ರಕಟಿಸಿದರು.
ಸಭೆಯ ಸಂದರ್ಭದಲ್ಲಿಯೇ ನೂರಾರು ಮಹಿಳೆಯರೂ ಕಚೇರಿಗೆ ನುಗ್ಗಲು ಯತ್ನಿಸಿದಾಗ ಮಹಿಳಾ ಪೊಲೀಸ್ ಸಿಬ್ಬಂದಿ ಅವರನ್ನು ತಡೆದರು.
ಕಡೂರು ಮತ್ತು ಬೀರೂರು ವೃತ್ತದ ಪೊಲೀಸ್ ಠಾಣಾಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತ್ ಹಾಕಲಾಗಿತ್ತು. ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮುಂಜಾಗ್ರತೆ ಕ್ರಮವಾಗಿ ಮೀಸಲು ಪೊಲೀಸ್ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಯಿತು.













