ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದ್ದು, 4000 ಕ್ಕೂ ಅಧಿಕ ಪೊಲೀಸರಿಂದ ಹೈ ಅಲರ್ಟ್ ಕೂಡ ನಿಯೋಜಿಸಲಾಗಿದೆ. ಈ ಬೆನ್ನಲ್ಲೇ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಗೆ 14 ದಿನಗಳ ಕಾಲ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.

ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರಿಗೆ ನಿರ್ಭಂಧ:
ಮುಸ್ಲಿಮರು ನಮ್ಮ ದತ್ತಪೀಠದಲ್ಲಿ ಉರುಸ್ ಆಚರಣೆ ಮಾಡುತ್ತಾರೆ. ನಾವು ನಾಗೇನಹಳ್ಳಿ ದರ್ಗಾದಲ್ಲಿ ಡಿ.26 ರಂದು ದತ್ತಜಯಂತಿ ಆಚರಣೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿದ್ದರು.
ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯು ಕೋಮು ಹಾಗೂ ಮತೀಯ ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಪ್ರಮೋದ್ ಮುತಾಲಿಕ್ ಮತ್ತು ಗಂಗಾಧರ ಮಹಾದೇವ್ ರಾವ್ ಕುಲಕರ್ಣಿ ಇವರುಗಳು ದತ್ತ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದಲ್ಲಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಸಾಧ್ಯತೆಗಳಿದ್ದು, 23-12-2023 ರಿಂದ 05-01-2024 ಮಧ್ಯರಾತ್ರಿ ಯವರೆಗೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಭಂದಿಸಿ ಜಿಲ್ಲಾಡಾಳಿತದಿಂದ ಆದೇಶ ಹೊರಡಿಸಿದ್ದಾರೆ.
ಮೂಡಿಗೆರೆ: ಕಾಣೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆ ವ್ಯಾಪ್ತಿಯ ಜಿ.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಸೃಷ್ಟಿ (19) ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ.
ಹಾಸನದ ವುಮೆನ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ, ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ವಾರ ಮನೆಗೆ ಬಂದಿದ್ದು, ಡಿಸೆಂಬರ್ 21 ರ ಗುರುವಾರ ಸಂಜೆ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದಳು. ಸೃಷ್ಟಿಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗಿತ್ತು ಆದರೆ ಪತ್ತೆಯಾಗಿರಲಿಲ್ಲ.
ಇಂದು (ಭಾನುವಾರ) ಮುಂಜಾನೆ ಗ್ರಾಮದ ಕುಡಿಯುವ ನೀರಿನ ಮೋಟರ್ ಅಳವಡಿಸಿರುವ ಬಾವಿಯಲ್ಲಿ ಯುವತಿಯ ಶವ ತೇಲುತ್ತಿರುವುದನ್ನು ವಾಟರ್ ಮ್ಯಾನ್ ಗಮನಿಸಿ ಮಾಹಿತಿ ನೀಡಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ದೂರು ದಾಖಲಾಗಿದ್ದು ಶವವನ್ನು ಮೇಲೆತ್ತಲು ತಯಾರಿ ನಡೆಸಲಾಗಿದೆ.
ಇನ್ನು ಸೃಷ್ಟಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.












