ಅರಣ್ಯ ಕಾಯಿದೆ 1963ರ ಸೆಕ್ಷನ್ 4ರಡಿ ಅಧಿಸೂಚನೆ ಆಗುವ ಮುನ್ನ ಮಂಜೂರಾಗಿರುವ ಭೂಮಿಯನ್ನು ಅರಣ್ಯದಿಂದ ಕೈಬಿಡಲು ಸರ್ಕಾರಕ್ಕೆ ಅವಕಾಶವಿದ್ದು, ಅಧಿಸೂಚನೆಯ ನಂತರ 30-40 ವರ್ಷಗಳಿಂದ ಮನೆಕಟ್ಟಿರುವ, ಉಳಿಮೆ ಮಾಡುತ್ತಿರುವ ಜನರಿಗೆ ನ್ಯಾಯ ಕೊಡಿಸಲು ಕೇಂದ್ರ ಹಾಗೂ ಸುಪ್ರೀಂಕೋರ್ಟ್ ಗೆ ವಿಶೇಷ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ವಿಕಲಚೇತನ ಆರೈಕೆದಾರರಿಗೆ 1000 ರೂ.ಪ್ರೋತ್ಸಾಹಧನ; ಈ ರೀತಿ ಅರ್ಜಿ ಸಲ್ಲಿಸಿ

ವಿಕಾಸಸೌಧದಲ್ಲಿಂದು ಚಿಕ್ಕಮಗಳೂರು ಜಿಲ್ಲೆಯ ಶಾಸಕರುಗಳು ಮತ್ತು ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ವಸತಿ ಪ್ರದೇಶ, ಪಟ್ಟಾಭೂಮಿ ಇತ್ಯಾದಿ ಇರುವ ಪರಿಭಾವಿತ ಅರಣ್ಯ ಹಾಗೂ ಸೆಕ್ಷನ್ 4 ಅಧಿಸೂಚನೆ ನಂತರ ಮಂಜೂರಾಗಿರುವ ಜಮೀನಿಗೆ ಪರ್ಯಾಯವಾಗಿ ಬೇರೆಡೆ ಲಭ್ಯವಿರುವ ಅರಣ್ಯೇತರ ಭೂಮಿ ನೀಡಿ ಈ ಜಮೀನನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಡುವಂತೆ ಸುಪ್ರೀಂಕೋರ್ಟ್ ಮತ್ತು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹಲವು ಪ್ರಕರಣಗಳಲ್ಲಿ ಸೆಕ್ಷನ್ 4 ಅಧಿಸೂಚನೆ ಆಗಿ 60-70 ವರ್ಷವಾಗಿದ್ದರೂ ಇನ್ನೂ ಸೆಕ್ಷನ್ 17 ಆಗಿರುವುದಿಲ್ಲ. 1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿ ಬಳಿಕ ಈಗ ಅಂತಹ ಅರಣ್ಯ ಕೈಬಿಡುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಕೇಂದ್ರ ಹಾಗೂ ಸುಪ್ರೀಂಕೋರ್ಟ್ ಗೆ ಮನವಿ ಮಾಡುವುದು ಅನಿವಾರ್ಯ ಎಂದು ತಿಳಿಸಿದರು.
ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ
ಚಿಕ್ಕಮಗಳೂರು ಜಿಲ್ಲೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿದ್ದು, ಇಲ್ಲಿ ಸಮೃದ್ಧ ಕಾನನ ಪ್ರದೇಶವಿದೆ. ಇಲ್ಲಿ ಒಂದೇ ಸರ್ವೆ ನಂಬರ್ ನಲ್ಲಿ 300-400 ಎಕರೆ ಜಮೀನಿದ್ದು, ಜಂಟಿ ಸರ್ವೆ ಆಗದ ಕಾರಣ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಕಂದಾಯ ಜಮೀನಿನ ಜಂಟಿ ಸರ್ವೆ ಮಾಡಿ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸಲು ಪ್ರಯತ್ನಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪರಿಭಾವಿತ ಅರಣ್ಯ (ಡೀಮ್ಡ್) ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿರುವ ಸರ್ವೆ ನಂಬರ್ ನಲ್ಲಿ ಕೂಡ ಮನೆಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಕಟ್ಟಡ, ಪಟ್ಟಾಭೂಮಿ ಇದೆ. ಈಗ ಅಂತಿಮವಾಗಿ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸುವ ಅವಕಾಶ ದೊರೆತಿದ್ದು, ಸಮರ್ಪಕವಾಗಿ ಸರ್ವೆ ನಡೆಸಿ ಕೈಬಿಡಲು ಅರ್ಹವಾದ ಜಮೀನಿನ ಪ್ರಮಾಣ ನಿರ್ಧರಿಸಿ, ಅದಕ್ಕೆ ಪರ್ಯಾಯವಾಗಿ ಬೇರೆ ಕಡೆ ಕಂದಾಯ ಭೂಮಿ ನೀಡುವುದಾಗಿ ಮತ್ತು ಅಲ್ಲಿ ಅರಣ್ಯ ಬೆಳೆಸುವುದಾಗಿ ತಿಳಿಸಿ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಬಹುದಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಇದನ್ನೂ ಓದಿ: ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಉದ್ಯೋಗ; 12,600 ಸಂಬಳ
ಈಗಾಗಲೇ 2022ರಲ್ಲಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿರುವ ಡೀಮ್ಡ್ ಅರಣ್ಯ ಕುರಿತ ಪ್ರಮಾಣಪತ್ರ ಸಾರ್ವಜನಿಕರಿಗೆ ಲಭ್ಯವಾಗುವಂತೆ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡುವಂತೆ ಸಹ ಅರಣ್ಯ ಸಚಿವರು ಸೂಚನೆ ನೀಡಿದರು.
ಹಾಸನ ಜಿಲ್ಲೆಯ ಅರಸೀಕೆರೆ ವ್ಯಾಪ್ತಿಯಲ್ಲಿನ ಕರಡಿ ಧಾಮದ ಸುತ್ತ ಪ್ರಸ್ತುತ 10 ಕಿ.ಮೀ. ಬಫರ್ ವಲಯ ಎಂದು ಘೋಷಿಸಲಾಗಿರುವ ಕಾರಣ ಗಡಿ ಭಾಗದ ಚಿಕ್ಕಮಗಳೂರು ರೈತರೂ ಸಂಕಷ್ಟ ಎದುರಿಸುವಂತಾಗಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು, ಈ ಮಿತಿಯನ್ನು 1 ಕಿ.ಮೀ.ಗೆ ಇಳಿಕೆ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಶೀಘ್ರವೇ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಆಧಾರ್ ಕಾರ್ಡ್ ಹೊಂದಿರುವವರು ಮಿಸ್ ಮಾಡ್ದೆ ಈ ಸುದ್ದಿ ಓದಿ












