ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅತ್ತಿಬೆಲೆ ಪಟಾಕಿ ದುರಂತ ಸಂಬಂಧ ಸಿ.ಎಂ ಸಿದ್ದರಾಮಯ್ಯ ಸಭೆ ನಡೆಸಿ, ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ. ಮಾಲೀನ್ಯಕಾರ ಪಟಾಕಿಗೆ ಸಿಡಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವಂತೆ ಸೂಚಿಸಲಾಗಿದೆ. ಪಟಾಕಿ ಸಿಡಿಸುವಾಗ ಸುಪ್ರೀಂಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದೆ. ದೀಪಾವಳಿ ಸಮೀಪವೇ ಬರುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿದ್ದೇವೆ ಎಂದಿದ್ದರು.
ಇದನ್ನೂ ಓದಿ; ಸಾರ್ವಜನಿಕರ ಗಮನಕ್ಕೆ; ರಾಜ್ಯದ ಪ್ರತಿಯೊಬ್ಬರ ಮೊಬೈಲ್ ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್!

ಈ ಹಿನ್ನಲೆಯಲ್ಲಿ ಪಟಾಕಿ ಮಾರಾಟ ಮಾಡುವ ಅಂಗಡಿ ಮಾಲೀಕರುಗಳಿಗೆ, ಪಟಾಕಿ ಅಂಗಡಿ ತೆರೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಬೆಂಕಿ ಅವಘಡಗಳು ಸಂಭವಿಸದಂತೆ, ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತಂತೆ ಪಟಾಕಿ ಮಾರಾಟ ಮಾಡುವ ಸಮಯದಲ್ಲಿ ಕಟ್ಟು ನಿಟ್ಟಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಅನುಸರಿಸಬೇಕಾದ ಕ್ರಮಗಳು ಏನು?
1. ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ: 728/2015 ರಲ್ಲಿನ ಐ.ಎ.ನಂ 44727/2021 ದಿನಾಂಕ: 23.10.2018, 21.10.2018 ಮತ್ತು 29.10.2021 ಹಾಗೂ ತದನಂತರ ನೀಡಿರುವ ನಿರ್ದೇಶನಗಳನ್ನು ಹಾಗೂ ಸರ್ಕಾರದ ಮಾರ್ಗಸೂಚಿಗಳಂತೆ ಪಟಾಕಿ ಅಂಗಡಿಗಳನ್ನು ನಿರ್ಮಿಸಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡತಕ್ಕದ್ದು.
2. ಹಸಿರು ಪಟಾಕಿಗಳನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಅಧಿಕೃತವಾಗಿ ಪರವಾನಗಿ ಹೊಂದಿರುವ ಮಾರಾಟಗಾರರು ಅಥವಾ ಉತ್ಪಾದಕರಿಂದ ಖರೀದಿಸತಕ್ಕದ್ದು.
3. ಹಸಿರು ಪಟಾಕಿ ಬಾಕ್ಸ್ ಗಳ ಮೇಲೆ ಬಾರ್ ಕೋಡಿಂಗ್ ಲೋಗೋ ಕಡ್ಡಾಯವಾಗಿ ಇರತಕ್ಕದ್ದು.
4. ಹಸಿರು ಪಟಾಕಿಗಳನ್ನು ಅಧಿಕೃತ ಉತ್ಪಾದಕರಿಂದ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡಿರಬೇಕು.
5. ಹಸಿರು ಪಟಾಕಿ ಮಾರಾಟದ ಮಳಿಗೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು ಪರವಾನಗಿಯಲ್ಲಿ ಸೂಚಿಸಿದ ದಿನಾಂಕದಿಂದ, ದಿನಾಂಕದರವರೆಗೆ ಮಾತ್ರ ತೆರೆದಿರತಕ್ಕದ್ದು.
6. ಪರವಾನಗಿಯಲ್ಲಿ ನಮೂದಿಸಿರುವ ದಿನಾಂಕ ಮತ್ತು ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕ ಹಸಿರು ಪಟಾಕಿ ಅಂಗಡಿಗಳನ್ನು ತೆರೆಯತಕ್ಕದು.
7. ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು.
8. ಒಂದು ಪಟಾಕಿ ಮಾರಾಟ ಮಳಿಗೆಯಿಂದ ಮತ್ತೊಂದು ಪಟಾಕಿ ಮಾರಾಟ ಮಳಿಗೆಗೆ ಕಡ್ಡಾಯವಾಗಿ ಕನಿಷ್ಟ 03 ಮೀಟರ್ ಅಂತರ ಇರತಕ್ಕದ್ದು.
9. ಪ್ರತಿಯೊಂದು ಮಳಿಗೆಗಳಲ್ಲಿ ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸತಕ್ಕದ್ದು.
10. ಹಸಿರು ಪಟಾಕಿ ಮಾರಾಟ ಮಳಿಗೆಗಳ ಸುತ್ತ-ಮುತ್ತ ದಿನನಿತ್ಯ ಸಾನಿಟೈಸೇಷನ್ ಮಾಡತಕ್ಕದು.
11. ಪಟಾಕಿ ಖರೀದಿಯ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆ ಆಗದಂತೆ ನೋಡಿಕೊಳ್ಳುತಕ್ಕದ್ದು.
12. ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿಯದಾಗಿರಬಾರದು, ಸಾಧ್ಯವಾದಷ್ಟು ಬೆಂಕಿಯನ್ನು ತಡೆಗಟ್ಟುವ ಸಾಮಗ್ರಿಗಳನ್ನು ಮಳಿಗೆ ನಿರ್ಮಾಣಕ್ಕೆ ಉಪಯೋಗಿಸಬೇಕು.
13. ಪ್ರತಿಯೊಂದು ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು.
14. ಪ್ರತಿಯೊಂದು ಮಳಿಗೆಗಳ ಗಾತ್ರ 10×10 ಚದರ ಅಡಿಗೆ ಸೀಮಿತಗೊಳಿಸಿರಬೇಕು ಮತ್ತು ಒಳಗೆ ಯಾವುದೇ ಹೆಚ್ಚಿನ ದಾಸ್ತಾನಿನ ವ್ಯವಸ್ಥೆ ಇರಬಾರದು.
15. ಪ್ರತಿಯೊಂದು ಮಳಿಗೆಯಲ್ಲಿ ಒಂದು 9 ಲೀಟರ್ ಸಾಮಾರ್ಥದ ವಾಟರ್ ಪ್ರೆಸರ್ ಮಾದರಿ ಅಗ್ನಿ ನಂದಕ ಹಾಗೂ ಎರಡು ಬಕೆಟ್ ಗಳಲ್ಲಿ ನೀರನ್ನು ಇಟ್ಟಿರಬೇಕು.
16. ಪ್ರತಿಯೊಂದು ಮಳಿಗೆ ಪಕ್ಕದಲ್ಲಿ ಎರಡು ಡ್ರಮ್ ನಲ್ಲಿ ಕನಿಷ್ಠ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು.
17. ಮಳಿಗೆಯಲ್ಲಿ ಅಡುಗೆ ಅಥವಾ ಧೂಮಪಾನಕ್ಕೆ ಅವಕಾಶ ಇರುವುದಿಲ್ಲ. ಈ ಬಗ್ಗೆ ಸಂಬಂಧಿತ ಸೂಚನ ಫಲಕವನ್ನು ಹಾಕಿರತಕ್ಕದ್ದು.
18. ರಾತ್ರಿ ವೇಳೆಯಲ್ಲಿ ಪಟಾಕಿ ಮಳಿಗೆಯಲ್ಲಿ ಯಾರು ಮಲಗಬಾರದು.
19. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಹಸಿರು ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧಿಸಿದ ಇಲಾಖೆ/ಪ್ರಾಧಿಕಾರಗಳಿಂದ ಅನುಮತಿ ಪಡೆದುಕೊಂಡಿರುವ ಬಗ್ಗೆ ದಾಖಲೆಗಳನ್ನು ಹೊಂದಿರತಕ್ಕದ್ದು.
20. ಪೊಲೀಸ್ ಠಾಣೆ/ವೃತ್ತ ಉಪವಿಭಾಗದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಪಟಾಕಿ ಸಂಗ್ರಹ ಸ್ಥಳಗಳಲ್ಲಿ, ಗೋದಾಮುಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರತಕ್ಕದ್ದು. ಸೂಕ್ತ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿಲ್ಲದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
21. ಕಾಲಕಾಲಕ್ಕೆ ಘನ ನ್ಯಾಯಾಲಯ ಮತ್ತು ಘನ ಸರ್ಕಾರವು ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸುವುದು.
22. ಪಟಾಕಿಗಳನ್ನು ಮಾರಾಟ ಮಾಡುವ ಸಂಬಂಧ ವಾಣಿಜ್ಯ ಮತ್ತು ತೆರಿಗೆ ಇಲಾಖೆಯಲ್ಲಿ ಜಿ.ಎಸ್.ಟಿ ನೋಂದಣಿಯಾಗಿರುವ ಬಗ್ಗೆ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳತಕ್ಕದ್ದು.
23. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ಮಾರ್ಗ ಸೂಚಿಗಳನ್ನು ಉಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರಡಿಯಲ್ಲಿ ಶಿಸ್ತಿನ/ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು.
24. ಪಟಾಕಿ ಅಂಗಡಿ ಮಳಿಗೆ/ಸಂಗ್ರಹಗಾರಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸುವ ವೈಯರ್ ಗಳು ಹರಿದಿರುವ ಬಗ್ಗೆ/ತುಂಡಾಗಿರುವ ಬಗ್ಗೆ ಖಚಿತಪಡಿಸಿಕೊಂಡು ಡ್ಯಾಮೇಜ್ ಇಲ್ಲದ ವೈಯರ್ ಗಳನ್ನು ಬಳಸತಕ್ಕದು.
25. ವಿದ್ಯುತ್ ವ್ಯತ್ಯಯ ಉಂಟಾದಾಗ ಬೆಂಕಿ ಕಡ್ಡಿ ಹಚ್ಚದೆ/ಗೀರದೆ ಮನೆಯಲ್ಲಿ, ಚಾರ್ಜ್ ಮಾಡಿದ ಎಮರ್ಜೆನ್ಸಿ ಲೈಟ್ ಬ್ಯಾಟರಿಯನ್ನು ಬಳಸತಕ್ಕದು.
26. ಪಟಾಕಿ ಅಂಗಡಿ ಮಳಿಗೆಗಳ ಬಳಿ ಅಗ್ನಿ ಪ್ರಚೋಧಕ ವಸ್ತುಗಳು (ಪೆಟ್ರೋಲ್, ಡಿಸೇಲ್) ಇರದಂತೆ ನೋಡಿಕೊಳ್ಳತಕ್ಕದು.
27. ಪಟಾಕಿ ಅಂಗಡಿ ಮಳಿಗೆಗಳು ರಸ್ತೆಯಿಂದ ಕನಿಷ್ಠ 50 ಮೀಟರ್ ದೂರದಲ್ಲಿರುವಂತೆ ಸ್ಥಾಪಿಸಬೇಕು.
28. ಬಸ್ ನಿಲ್ದಾಣಗಳು, ಪೆಟ್ರೋಲ್ ಬಂಕ್ ಗಳು, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಇಲ್ಲದ ಸ್ಥಳಗಳಲ್ಲಿ ಮತ್ತು ಹೆಚ್ಚಿನ ಜನ ಸಂದಣಿ ಇರುವಂತಹ ಸ್ಥಳಗಳನ್ನು ಹೊರತುಪಡಿಸಿದ ಪ್ರದೇಶದಲ್ಲಿ ಪಟಾಕಿ ಅಂಗಡಿ ಮಳಿಗೆಗಳನ್ನು ಸ್ಥಾಪಿಸುವುದು.
29. 20 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿ ಅಂಗಡಿಗಳನ್ನು ಸ್ಥಾಪಿಸಿದಾಗ ಸದರಿ ಅಂಗಡಿಗಳ ಸಮೀಪ ಅಗ್ನಿಶಾಮಕ ಇಲಾಖೆಯಿಂದ ಒಂದು ಅಗ್ನಿ ನಂದಕ ವಾಹನವನ್ನು ಕಡ್ಡಾಯವಾಗಿ ನಿಲಿಸಿಕೊಳ್ಳುವುದು.
30. ಕಡ್ಡಾಯವಾಗಿ ಮೇಲ್ಕಾಣಿಸಿದ ಎಲ್ಲಾ ನಿಭಂದನೆಗಳಿಗೆ ಒಳಪಟ್ಟು ಪಟಾಕಿ ಅಂಗಡಿ ಮಳಿಗೆಗಳನ್ನು ಸ್ಥಾಪಿಸಿಕೊಳ್ಳತಕ್ಕದ್ದು, ಮೇಲಿನ ನಿಭಂದನೆಗಳನ್ನು ಉಲ್ಲಂಘಿಸಿದರೆ, ಕಾನೂನು ಕ್ರಮ ಜರುಗಿಸಲಾಗುವುದು, ಹಾಗೂ ಯಾವುದೇ ರೀತಿಯ ಅವಘಡಗಳು ಸಂಭವಿಸಿದರೆ ಸಂಬಂಧಿಸಿದ ಪರವಾನಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.
ಪಟಾಕಿ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಮೇಲ್ಕಂಡ ಎಲ್ಲಾ ನೀತಿ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸಿ, ಸಹಕರಿಸುವಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ಕೋರಿದೆ.












