ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವುದು ದೊಡ್ಡ ಸವಾಲಾಗಿದ್ದು, ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲೇ ಸೂಕ್ತ ಪೂರ್ವಭಾವಿ ತಯಾರಿ ನಡೆಸಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಬುದ್ಧ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ

ಶೃಂಗೇರಿ ತಾಲ್ಲೂಕಿನ ಮೆಣಸೆಯ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. “ನನ್ನ ಪ್ರೀತಿಯ ಪುಟ್ಟ ಮಕ್ಕಳೇ, ಇಂದು ನಿಮ್ಮೆಲ್ಲರ ಮುಗ್ಧ ಮುಖಗಳನ್ನು ನೋಡಿದಾಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇದೇ ರೀತಿ ಸಾಲಿನಲ್ಲಿ ಕುಳಿತು ಕನಸು ಕಾಣುತ್ತಿದ್ದ ನನ್ನ ಬಾಲ್ಯ ನೆನಪಾಗುತ್ತದೆ. ನಾನು ಓದಿದ್ದು ಒಂದು ಪುಟ್ಟ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ. ಅಂದು ನಮಗೆ ಇಂದಿನಂತೆ ಸ್ಮಾರ್ಟ್ ಕ್ಲಾಸ್ಗಳು ಅಥವಾ ಇಂಟರ್ನೆಟ್ ಸೌಲಭ್ಯಗಳಿರಲಿಲ್ಲ. ಒಂದು ಸಣ್ಣ ವಿಷಯ ತಿಳಿಯಬೇಕಾದರೂ ಮೈಲಿಗಟ್ಟಲೆ ನಡೆದು ಗ್ರಂಥಾಲಯಕ್ಕೆ ಹೋಗಬೇಕಿತ್ತು ಅಥವಾ ಶಿಕ್ಷಕರನ್ನೇ ಅವಲಂಬಿಸಬೇಕಾಗುತ್ತಿತ್ತು.
ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಓದುತ್ತಾ, ಈ ದೇಶದ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ಕನಸು ಕಂಡೆ. ಸತತ ಪರಿಶ್ರಮ ಮತ್ತು ಸೋಲೊಪ್ಪದ ಛಲದಿಂದ ಇಂದು ನಿಮ್ಮ ಮುಂದೆ ಈ ಉನ್ನತ ಹುದ್ದೆಯಲ್ಲಿ ನಿಲ್ಲಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ವ್ಯಾಸಂಗದ ಸಮಯದಲ್ಲೇ ದೃಢನಿಶ್ಚಯ ಮಾಡಿಕೊಂಡು ಅಧ್ಯಯನದತ್ತ ಮುನ್ನಡೆಬೇಕು. ಸುತ್ತಮುತ್ತ ನಡೆಯುವ ಘಟನೆಗಳ ಬಗ್ಗೆ ಸಾಮಾನ್ಯ ಜ್ಞಾನ ಸಂಪಾದಿಸಿಕೊಳ್ಳುವುದು ಅತ್ಯಂತ ಅಗತ್ಯ. ನಾನು ಇದೇ ದಾರಿಯಲ್ಲಿ ಸಾಗಿದ್ದರಿಂದ ಸಾಧನೆ ಸಾಧ್ಯವಾಯಿತು,” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: ಮಾ.18 ರಿಂದ SSLC ಪರೀಕ್ಷೆ ಆರಂಭ; ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸಂತೋಷ್ ಕಾಳ್ಯ ಮಾತನಾಡಿ, “ಇಂದು ಜಗತ್ತಿನ ಯಾವುದೇ ಮೂಲೆಯ ಶ್ರೇಷ್ಠ ಶಿಕ್ಷಣ ನಿಮ್ಮ ಬೆರಳ ತುದಿಯಲ್ಲಿದೆ. ಕೇವಲ ಪುಸ್ತಕಗಳಿಗೆ ಸೀಮಿತವಾಗದೇ ಅನಿಮೇಷನ್ ಮತ್ತು ವಿಡಿಯೋಗಳ ಮೂಲಕ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ನಮ್ಮೊಂದಿಗಿರುವ ಈ ಸಾಧಕ ವ್ಯಕ್ತಿ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ವಿಚಾರ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ಪ್ರಬುದ್ಧರವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಬುದ್ಧರವರ ತಾಯಿ ಉಷಾ, ಎಸ್ಡಿಎಂಸಿ ಸದಸ್ಯರಾದ ಅರುಣ್, ಲಿಂಗಪ್ಪ, ಮರೀಸ್ವಾಮಿ, ಮುಖ್ಯ ಶಿಕ್ಷಕಿ ಜಯಂತಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂದ್ಯಾ ಮರಿಯಪ್ಪ ನಾಯ್ಕ, ಸುಷ್ಮಾ ಸುರೇಂದ್ರ, ತ್ರಿಮೂರ್ತಿ ಹೊಸ್ತೋಟ ಹಾಗೂ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.












