ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹೊಸ ವರ್ಷದ ಸ್ವಾಗತಕ್ಕೆ ಕಾಫಿನಾಡು ಸಜ್ಜಾಗುತ್ತಿರುವ ಬೆನ್ನಲ್ಲೇ, ಪ್ರವಾಸಿಗರ ಸುರಕ್ಷತೆ ಮತ್ತು ಅಹಿತಕರ ಘಟನೆಗಳ ತಡೆಗಟ್ಟುವಿಕೆಗಾಗಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆʼ

ಜಿಲ್ಲೆಯ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಸೇರಿದಂತೆ ಪ್ರಮುಖ 22 ಪ್ರವಾಸಿ ತಾಣಗಳಿಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಈ ತಾಣಗಳಿಗೆ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಆನ್ ಲೈನ್ ಮುಖಾಂತರ ನಿಷೇಧಿಸುವ ಸ್ಥಳಗಳ ಮಾರ್ಗದಲ್ಲಿ ಇರುವ ಹೋಂ ಸ್ಟೇ ರೆಸಾರ್ಟ್ ಗಳನ್ನು ಕಾಯ್ದಿರಿಸಿದ ಪ್ರವಾಸಿಗರಿಗೆ ಸಂಬಂಧಪಟ್ಟ ಹೋಂ ಸ್ಟೇ ಮತ್ತು ರೆಸಾರ್ಟ್ ಗೆ ಹೋಗಲು ಹೊರತುಪಡಿಸಿ ಇತರೆ ಪ್ರವಾಸಿಗರನ್ನು ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯ ಜಾವರಿನ್ ಚೆಕ್ ಪೋಸ್ಟ್ ನಿಂದ ಮೇಲ್ಬಾಗಕ್ಕೆ ಹೋಗುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಝರಿ ಫಾಲ್ ಹೊನ್ನಮ್ಮನಹಳ ಗಾಳಿಕೆರೆ ಹಾಗೂ ಹಿರೇಕೊಳಲೆ ಕೆರೆ. ಕಾಮೇನಹಳ್ಳಿ ಗ್ರಾಮದಲ್ಲಿರುವ ಡೈಮಂಡ್ ಫಾಲ್ಸ್, ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯ ಎತ್ತಿನಭುಜ, ದೇವರಮನೆ, ರಾಣಿಝರಿ, ಬಲ್ಲಾಳರಾಯನ ದುರ್ಗ, ಬಂಡಾಜೆ ಫಾಲ್ಸ್ ಕುಡಿಗೆ ಫಾಲ್ಸ್, ಕಳಸ ತಾಲ್ಲೂಕು ವ್ಯಾಪ್ತಿಯ ಕ್ಯಾತನಮಕ್ಕಿ ರುದ್ರಪಾದ, ತೂಗು ಸೇತುವೆ ಮತ್ತು ಅಬ್ಬುಗುಡಿಗೆ ಫಾಲ್ಸ್, ಕಡೂರು ತಾಲ್ಲೂಕು ವ್ಯಾಪ್ತಿಯ ಆಯ್ಯನಕೆರೆ, ಮದಗದಕೆರೆ, ತರೀಕೆರೆ ತಾಲ್ಲೂಕು ವ್ಯಾಪ್ತಿಯ ಕೆಮ್ಮಣ್ಣುಗುಂಡಿ, ಕಲ್ಲತ್ತಿರಿ. ಹೆಬ್ಬೆ ಫಾಲ್ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತಾ?; FSSAI ವರದಿ ಇಲ್ಲಿದೆ ನೋಡಿ
ಎಲ್ಲಾ ಪ್ರವಾಸಿ ತಾಣಗಳ ಪ್ರವೇಶ ದ್ವಾರ ಹಾಗೂ ಚೆಕ್ ಪೋಸ್ಟ್ಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ವಿಶೇಷ ನಿಗಾ ಇಡಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.












