ಪುಟ್ಟೇನಹಳ್ಳಿಯಲ್ಲಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಖತರ್ನಾಕ್ ಮಾಡೆಲ್ ಒಬ್ಬಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ನೇಹಾ ಅಲಿಯಾಸ್ ಮೆಹರ್ ಎಂದು ಗುರುತಿಸಲಾಗಿದೆ.

ಈಕೆಯನ್ನು ಮುಂಬೈನಲ್ಲಿ ಬಂಧಿಸಿದ ಪುಟ್ಟೇನಹಳ್ಳಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಈ ಮೊದಲು ಇದೇ ಪ್ರಕರಣದಲ್ಲಿ ಆರೋಪಿಗಳಾದ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬುವರನ್ನು ಬಂಧಿಸಲಾಗಿದೆ. ಹನಿಟ್ರ್ಯಾಪ್ ಜಾಲಕ್ಕೆ ಕೆಡವಲು ಆರೋಪಿಗಳು ‘ಕತ್ನಾ’ ಅಸ್ತ್ರ ಪ್ರಯೋಗ ಮಾಡುತ್ತಿದ್ದರು. ಬಾಂಬೆ ಮಾಡೆಲ್ ಇಟ್ಟುಕೊಂಡು ಆರೋಪಿಗಳು ಮಿಕಾಗಳಿಗೆ ಬಲೆ ಬೀಸುತ್ತಿದ್ದರು ಎಂದು ತಿಳಿದುಬಂದಿದೆ.

ಬಿಕಿನಿ ಮೂಲಕ ಸ್ವಾಗತ ಮಾಡ್ತಿದ್ದ ಯುವತಿ

ಟೆಲಿಗ್ರಾಮ್ ಮೂಲಕ ಯುವಕರನ್ನು ಸಂಪರ್ಕ ಮಾಡುತ್ತಿದ್ದ ನೇಹಾ, ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಆಹ್ವಾನಿಸುತ್ತಿದ್ದಳು. ಅದರಂತೆ ಜೆಪಿ ನಗರ ಐದನೇ ಹಂತದಲ್ಲಿರುವ ಮನೆಗೆ ಬಂದ ಯುವಕರನ್ನು ಬಿಕಿನಿ ತೊಟ್ಟು ಹಗ್ ಮಾಡಿ ಸ್ವಾಗತ ಕೋರುತ್ತಿದ್ದಳು. ನಂತರ ನಡೆಯುವ ರಂಗಿನಾಟದ ದೃಶ್ಯವನ್ನು ಮನೆಯೊಳಗೆ ಇರುವ ಸಿ.ಸಿ.ಟಿವಿ ಕ್ಯಾಮರಾದಲ್ಲಿ ಸೆರೆಯಾಗುತ್ತಿತ್ತು.
ಅತಿಥಿ ಎಂಟ್ರಿಯಾಗಿ ಮೂರೇ ನಿಮಿಷಕ್ಕೆ ಅದೇ ಮನೆಗೆ ಗ್ಯಾಂಗ್ ಎಂಟ್ರಿ ಕೊಡುತ್ತಿತ್ತು. ಬಾಗಿಲು ತೆರೆದು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ನಂತರ ಸಂತ್ರಸ್ತರ ಮೊಬೈಲ್ ಕಸಿದು ಅದರಲ್ಲಿರುವ ಇತರರ ನಂಬರ್ ಪಡೆದು ಬೆದರಿಕೆ ಹಾಕಿ ಹಣಕ್ಕೆ ಡಿಮ್ಯಾಂಡ್ ಇಡುತ್ತಿದ್ದರು.

ಹಣ ಕೊಡದಿದ್ದರೆ ವಿಡಿಯೋವನ್ನು ಸ್ನೇಹಿತರು, ಸಂಬಂಧಿಕರು, ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಯುವತಿ ಮುಸ್ಲಿಂ ಆಗಿದ್ದು, ಆಕೆಯನ್ನ ಮದುವೆ ಆಗಬೇಕು. ಮದುವೆ ಆಗಬೇಕೆಂದರೆ ಮತಾಂತರ ಆಗಬೇಕು ಮತ್ತು ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕುತ್ತಿದ್ದರು.
ಈ ರೀತಿಯಾಗಿ ಹನಿಟ್ರ್ಯಾಪ್ ಜಾಲಕ್ಕೆ ಬಿದ್ದ ಸಂತ್ರಸ್ತರೊಬ್ಬರು ಆರೋಪಿಗಳ ಹಣ ವರ್ಗಾವಣೆ ಮಾಡಿದ ನಂತರ ಅಲ್ಲಿಂದ ಹೊರಬಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ 12ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದ್ದು, ಒಟ್ಟು 30 ಕ್ಕೂ ಹೆಚ್ಚು ಲಕ್ಷ ವರ್ಗಾಯಿಸಿಕೊಂಡಿದ್ದಾರೆ.













