
ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ರಸ್ತೆ ಬದಿ ನಿಂತಿದ್ದ ಬೋರ್ ವೆಲ್ ಲಾರಿಗೆ ಬೊಲೆರೋ ಜೀಪ್ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಬಳಿ ಬುಧವಾರ ಸಂಭವಿಸಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಎಂ.ಸಿ. ಹಳ್ಳಿಯಿಂದ ಪ್ರತಿದಿನ ಬೊಲೆರೋ ಜೀಪ್‌ನಲ್ಲಿ ಕಾರ್ಮಿಕರು ಕೂಲಿ ಕೆಲಸಕ್ಕಾಗಿ ಕಲ್ಲತ್ತಿಗಿರಿಗೆ ತೆರಳುತ್ತಿದ್ದರು. ಅದರಂತೆ ಕೆಲಸ ಮುಗಿಸಿಕೊಂಡು ಕಲ್ಲತ್ತಿಗಿರಿಯಿಂದ ಎಂ.ಸಿ. ಹಳ್ಳಿಗೆ ಮರಳುತ್ತಿದ್ದಾಗ, ದೋರನಾಳು ಗ್ರಾಮದ ಬಳಿ ರಸ್ತೆ ಬದಿ ನಿಂತಿದ್ದ ಬೋರ್ ವೆಲ್ ಲಾರಿಗೆ ಜೀಪ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟರೆ ಆರು ಮಂದಿ ಗಂಭೀರ ಗಾಯಗೊಂಡಿದ್ದು ಅವರನ್ನು ತಕ್ಷಣವೇ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ತರೀಕೆರೆ, ಲಿಂಗದಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.













