
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗೆ ಹಳದಿ ಎಲೆ ಹಾಗೂ ಎಲೆಚುಕ್ಕಿ ರೋಗಗಳು ಅಪಾಯಕಾರಿಯಾಗಿ ವ್ಯಾಪಿಸುತ್ತಿದ್ದು, ಶಾಶ್ವತ ಪರಿಹಾರ ಸಿಗದೇ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ರೋಗಗಳಿಗೆ ಪರಿಹಾರವಾಗಿ ‘ಬಯೋಶಮನ’ ಎಂಬ ನೈಸರ್ಗಿಕ ಔಷಧಿಯನ್ನು ಕಂಡುಹಿಡಿದಿರುವುದಾಗಿ ಹೈಟೆಕ್ ದೋಟಿ, ಇನಾಮಿಕ್ ಟೆಕ್ನಾಲಜಿ ಸಂಸ್ಥೆಯ ಸಿಇಒ ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಹೇಳಿಕೆ ನೀಡಿದ ಅವರು, ಕಳೆದ 6 ವರ್ಷಗಳಿಂದ ಬಯೋಟೆಕ್ನಾಲಜಿ ವಿಜ್ಞಾನಿಗಳ ಸಹಕಾರದೊಂದಿಗೆ ಸಂಶೋಧನೆ ನಡೆಸಿ ಈ ಔಷಧಿಯನ್ನು ಅಭಿವೃದ್ಧಿಪಡಿಸಿದ್ದೇವೆ ಎಂದರು. ಮೊದಲು ತಮ್ಮ ತೋಟ ಸೇರಿದಂತೆ ನೂರಾರು ರೈತರ ತೋಟಗಳಲ್ಲಿ ಪರೀಕ್ಷೆ ನಡೆಸಿದಾಗ ಪರಿಣಾಮಕಾರಿ ಫಲಿತಾಂಶ ದೊರೆತಿದ್ದು, ಯಶಸ್ಸು ಕಂಡಿದೆ ಎಂದು ಹೇಳಿದರು.

ಸಿದ್ದಾಪುರದ ಕ್ಯಾದಗಿ ಪ್ರದೇಶದಲ್ಲಿ ಸುಮಾರು 200 ಇಂಚು ಮಳೆ ಬಂದಿದ್ದರೂ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಈ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಒಂದು ಬಾರಿ ಸಿಂಪಡಿಸಿದ ಬಳಿಕ 3 ತಿಂಗಳು ಕೊಳೆರೋಗದಿಂದ ರಕ್ಷಣೆ ಸಿಕ್ಕಿದ್ದು, ಎಲೆಚುಕ್ಕಿ ರೋಗ 12 ತಿಂಗಳು ಕಳೆದರೂ ಮರುಕಳಿಸಿಲ್ಲ ಎಂದು ತಿಳಿಸಿದ್ದಾರೆ.

ಬಯೋಶಮನ ಔಷಧಿ ಸಿಂಪಡಿಸಿದ ಒಂದು ವಾರದಲ್ಲೇ ಗಿಡಗಳು ಹಸಿರಾಗಿ ಚಿಗುರುವುದರ ಜೊತೆಗೆ ರೋಗವು ಪಕ್ಕದ ಎಲೆಗಳಿಗೆ ಹರಡುವುದನ್ನು ತಡೆಯುತ್ತದೆ. ರೈತರು ಉತ್ತಮ ಫಲಿತಾಂಶ ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದೇ ಔಷಧಿಯನ್ನು ಕಾಫಿ, ಕಾಳುಮೆಣಸು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಫಂಗಸ್ ಸಮಸ್ಯೆಗಳಿಗೆ ಹಾಗೂ ತರಕಾರಿ, ಹಣ್ಣು, ಹೂವು, ಶುಂಠಿ ಸೇರಿದಂತೆ ಎಲ್ಲಾ ತರಹದ ಗಿಡಗಳಿಗೆ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಮಲೆನಾಡು ಮತ್ತು ಬಯಲುಸೀಮೆಯಲ್ಲಿ ಕೀಟಬಾಧೆಯಿಂದ ಉಂಟಾಗುವ ಸಮಸ್ಯೆಗೆ ‘ಬಯೋಬೀಟಲ್ ಶೀಲ್ಡ್’ ಎಂಬ ಇನ್ನೊಂದು ಔಷಧಿಯನ್ನು ಅಭಿವೃದ್ಧಿಪಡಿಸಲಾಗಿದೆ. ಅಡಕೆ, ಕಾಫಿ, ಕಾಳುಮೆಣಸು, ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ನಿಯಂತ್ರಿಸಲು ಇದು ಸಹಾಯಕವಾಗಿದ್ದು, ಕನಿಷ್ಠ 6ರಿಂದ 12 ತಿಂಗಳುಗಳವರೆಗೆ ರಕ್ಷಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.














