ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನಲ್ಲಿ ಬೈಕ್ ಸವಾರರ ನಿರ್ಲಕ್ಷ್ಯಕ್ಕೆ ಜನರು ಬೆಚ್ಚಿಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಗೌಡಳ್ಳಿ ಸಮೀಪದ ಬಿಳ್ಳೂರು ಬಳಿ ನಡೆದಿದೆ.
ಮಳೆಯಿಂದಾಗಿ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳೀಯರು ಅಪಾಯವಿದೆ ಎಂದು ಎಚ್ಚರಿಕೆ ನೀಡಿದರೂ, ಕೆಲ ಬೈಕ್ ಸವಾರರು ಜೀವದ ಹಂಗು ತೊರೆದು ಕಂಬದ ಪಕ್ಕದಲ್ಲೇ ಸಾಗಿದ್ದಾರೆ. ಬೈಕ್ ಸವಾರರು ಕಂಬದ ಸಮೀಪ ಹಾದುಹೋಗುತ್ತಿದ್ದ ಕ್ಷಣದಲ್ಲೇ ವಿದ್ಯುತ್ ಕಂಬ ಭಾರೀ ಸದ್ದಿನೊಂದಿಗೆ ಸಿಡಿದಿದ್ದು, ದೃಶ್ಯ ಮತ್ತೊಬ್ಬ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಗೊಂಡಿದೆ.

ವಿದ್ಯುತ್ ತಂತಿ ಬೈಕ್ ಮೇಲೆ ಬಿದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೇ ಸವಾರರು ಪಾರಾಗಿದ್ದಾರೆ.

ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಮಳೆಗಾಲದಲ್ಲಿ ಇಂತಹ ಅಪಾಯಕಾರಿ ವಿದ್ಯುತ್ ಅವಘಡಗಳ ಬಳಿ ಸಾಹಸ ಪ್ರದರ್ಶನ ಮಾಡದೇ ಸುರಕ್ಷತೆ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.















