
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಬಾಳೂರು ಹೋಬಳಿಯ ಜಾವಳಿ ಸಮೀಪದ ಕೆಳಗೂರು ಸಂಪ್ಲಿ ಗ್ರಾಮದಲ್ಲಿ ರೈತ ಚಿನ್ನೇಗೌಡ ಎಂಬುವವರ ಕೃಷಿ ಕೆಲಸಕ್ಕೆ ಬಳಸುತ್ತಿದ್ದ ಜೋಡೆತ್ತುಗಳನ್ನು ಖದೀಮರು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ.
ಚಿನ್ನೇಗೌಡರು ಕಳೆದ 15 ವರ್ಷಗಳಿಂದ ಈ ಎತ್ತುಗಳನ್ನು ಸಾಕಿಕೊಂಡಿದ್ದರು. ಮೇ 6ರಂದು ಕೊಟ್ಟಿಗೆಯ ನೆಲಕ್ಕೆ ಸಿಮೆಂಟ್ ಹಾಕಿದ್ದ ಕಾರಣ, ಎತ್ತುಗಳನ್ನು ಕೊಟ್ಟಿಗೆಯ ಪಕ್ಕದ ಖಾಲಿ ಜಾಗದಲ್ಲಿ ಕಟ್ಟಲಾಗಿತ್ತು. ರಾತ್ರಿ 11 ಗಂಟೆಯವರೆಗೂ ಎತ್ತುಗಳು ಅಲ್ಲೇ ಇದ್ದವು. ಆದರೆ, ಮೇ 7ರ ಬೆಳಿಗ್ಗೆ ನೋಡಿದಾಗ ಎತ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಯಾರೋ ಅಪರಿಚಿತ ಕಳ್ಳರು ಹಗ್ಗ ಸಮೇತ ಎತ್ತುಗಳನ್ನು ಅಪಹರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಚಿನ್ನೇಗೌಡ ಮತ್ತು ಅವರ ಪುತ್ರ ಅರುಣ್ ಕೆ.ಸಿ. ಅವರು ಬಾಳೂರು ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದು, ಕಾನೂನು ಕ್ರಮ ಕೈಗೊಂಡು ಎತ್ತುಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ಜೀವನದ ಆಧಾರವಾಗಿದ್ದ ಎತ್ತುಗಳನ್ನು ಕಳೆದುಕೊಂಡ ರೈತ ಕುಟುಂಬ ತೀವ್ರ ಆಕ್ರಂದನದಲ್ಲಿದೆ. ಅಲ್ಲದೆ ಮನೆಯ ಅಂಗಳದಲ್ಲೇ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಭಾಗದಲ್ಲಿ ಇತ್ತೀಚೆಗೆ ದನಗಳ್ಳರ ಹಾವಳಿ ಮಿತಿಮೀರಿದ್ದು, ಗೋಹತ್ಯೆಗಾಗಿ ಜಾನುವಾರುಗಳನ್ನು ಕದಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸರು ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಬಂಧಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.















