ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೈಯ್ಯಲು ಯತ್ನಿಸಿದ ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಿರುವ ಘಟನೆ ಎನ್ ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಪೂರ್ಣೇಶ್ ಎಂಬ ರೌಡಿ ಶೀಟರ್ ಮೇಲೆ ಹಲವಾರು ಕೇಸ್ ಗಳಿದ್ದು ಕೋರ್ಟ್ ಗೆ ಹಾಜರಾಗುವಂತೆ ವಾರೆಂಟ್ ಜಾರಿಮಾಡಲಾಗಿತ್ತು. ಆದರೆ ಪೂರ್ಣೇಶ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇಂದು ಬೆಳಗ್ಗೆ 6:15 ಸುಮಾರಿಗೆ ಬಾಳೆಹೊನ್ನೂರು ಪಿಎಸ್ ಐ ದಿಲೀಪ್ ಕುಮಾರ್ ಕುಮಾರ್ ನೇತೃತ್ವದಲ್ಲಿ ಬಂಧಿಸಲು ತೆರಳಿದ್ದು, ಸೆರೆಂಡರ್ ಆಗುವಂತೆ ತಿಳಿಸಿದ್ದಾರೆ. ಆದರೆ ಪೂರ್ಣೇಶ್ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಗಾಳಿಯಲ್ಲಿ ಎರಡು ಸುತ್ತು ಗುಂಡು ಹೊಡೆದರೂ ಮಾತು ಕೇಳದ ಪೂರ್ಣೇಶ್ ಕಾಲಿಗೆ ಸಬ್ ಇನ್ಸ್ಪೆಕ್ಟರ್ ದಿಲೀಪ್ ಫೈರಿಂಗ್ ಮಾಡಿದ್ದಾರೆ.


ರೌಡಿಯಿಂದ ಹಲ್ಲೆಗೊಳಗಾದ ಪೇದೆ ಮಂಜುನಾಥ್ ರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಪೊಲೀಸರಿಂದ ಗುಂಡು ತಿಂದ ರೌಡಿ ಶೀಟರ್ ಪೂರ್ಣೇಶ್ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಂ, ಕೊಪ್ಪ ಡಿವೈ ಎಸ್ ಪಿ ಅನಿಲ್ ಮಹದಾಸ್ ಭೇಟಿ ನೀಡಿದ್ದಾರೆ.

ಪೂರ್ಣೇಶ್ ಮೇಲೆ 4 ಕೊಲೆ ಯತ್ನದ ಕೇಸ್ ಸೇರಿದಂತೆ ಒಟ್ಟು 8 ಕೇಸ್ ಗಳು ಇವೆ. ಕೋರ್ಟ್ ಗೆ ಹಾಜರಾಗುವಂತೆ ವಾರೆಂಟ್ ಜಾರಿ ಮಾಡಲಾಗಿತ್ತು ಆದ್ರೆ ಪೂರ್ಣೇಶ್ ದೊಡ್ಡ ಮರಗಳ ಮೇಲೆ, ಕಾಡು, ಕಾಫಿತೋಟದಲ್ಲಿ ಅಡಗಿ ಕುಳಿತಿರುತ್ತಿದ್ದ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













