
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಜನವರಿ 15ರಿಂದ 25ರವರೆಗೆ ಕ್ಷೇತ್ರ ಮಟ್ಟದಲ್ಲಿ “ಮಲೆನಾಡಿಗರ ಬದುಕನ್ನು ಉಳಿಸಿ” ಎಂಬ ಘೋಷವಾಕ್ಯದೊಂದಿಗೆ ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಗೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಚಾಲನೆ ನೀಡಿದರು.
ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ?; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ಯಾತ್ರೆಗೆ ಪುಷ್ಪಾರ್ಚನೆ ಸಲ್ಲಿಸಿ ಶೃಂಗೇರಿ ಪಟ್ಟಣದ ಜನತೆ ಆತ್ಮೀಯ ಸ್ವಾಗತ ಕೋರಿದರು. ಯಾತ್ರೆಯ ಮೊದಲ ಹಂತವಾಗಿ (ನಿನ್ನೆ) 15.01.2026ರಂದು ಶೃಂಗೇರಿ ಪಟ್ಟಣ ಸೇರಿದಂತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ, ನೆಮ್ಮಾರು, ಕಿಗ್ಗಾ, ಕಲ್ಕಟ್ಟೆ ಭಾಗಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಜೊತೆಗೆ ಮನೆಮನೆಗೆ ಕರಪತ್ರ ವಿತರಣೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯ, ಆನೆ ಮತ್ತು ಕಾಡುಪ್ರಾಣಿಗಳ ಹಾವಳಿ, ನಿವೇಶನ ಹಾಗೂ ವಾಸದ ಮನೆ ಸಮಸ್ಯೆ, ಜೀವನಾಧಾರಿತ ಸಾಗುವಳಿ ಭೂಮಿ ತೆರವು, ಎಸ್‌ಐಟಿ ರಚನೆ, ಸೊಪ್ಪಿನ ಬೆಟ್ಟ, ಮಲೆನಾಡಿನಲ್ಲಿ ಪರ್ಯಾಯ ಬೆಳೆ, ಸೆಕ್ಷನ್ 4(1), ಸೆಕ್ಷನ್ 17, ಡೀಮ್ಡ್ ಅರಣ್ಯ ಕಾಯ್ದೆ, ಕಾರ್ಮಿಕರು ಮತ್ತು ವರ್ತಕರ ಸಮಸ್ಯೆಗಳು, ಕೆರೆಕಟ್ಟೆ ಹಾಗೂ ಭದ್ರ ಹಿನ್ನೀರಿನ ಸಂತ್ರಸ್ತರಿಗೆ ನ್ಯಾಯ, ಭದ್ರ ಹುಲಿ ಯೋಜನೆಯ ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮ ವಲಯ, ಹಳದಿ ಎಲೆ, ಕೊಳೆ ರೋಗ, ಎಲೆ ಚುಕ್ಕಿ ರೋಗ, ಕೃಷಿ ವಲಯದಲ್ಲಿ ಸರ್ಫೇಸಿ ಕಾಯ್ದೆ, ಬೆಳೆ ವಿಮೆ ಸಮಸ್ಯೆ, ಪಟ್ಟಣಗಳಿಗೆ ಯುವಕರ ವಲಸೆ ಸೇರಿದಂತೆ ಹಲವಾರು ಪ್ರಸ್ತುತ ಹಾಗೂ ಭವಿಷ್ಯದ ಆತಂಕಗಳ ಕುರಿತು ರೈತರು, ಕಾರ್ಮಿಕರು ಮತ್ತು ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಯಾತ್ರೆಯನ್ನು ರೂಪಿಸಲಾಗಿದೆ.
ಇದನ್ನೂ ಓದಿ: ಸೂರ್ಯನಂತೆ ಹೊಳೆಯಲಿದೆ ಈ ರಾಶಿಯರ ಅದೃಷ್ಟ!; ಯಾವ ರಾಶಿಯವರಿಗೆ ಅದೃಷ್ಟ?
ಪರಿಸರ ಸಂರಕ್ಷಣೆ ಅಗತ್ಯವಾದರೂ, ಅದರ ಹೆಸರಿನಲ್ಲಿ ಸ್ಥಳೀಯ ನೆಲವಾಸಿಗಳ ಬದುಕು ಕಸಿದುಕೊಳ್ಳಬಾರದು. ಅವೈಜ್ಞಾನಿಕವಾಗಿ ಜಾರಿಯಾಗುತ್ತಿರುವ ಹಲವು ಯೋಜನೆಗಳಿಂದ ಮಲೆನಾಡಿನ ರೈತರು ಮತ್ತು ಕಾರ್ಮಿಕರ ಹಕ್ಕುಗಳು ಬಲಿಯಾಗುತ್ತಿರುವುದಾಗಿ ಸಮಿತಿ ತಿಳಿಸಿದೆ.
ಕಿಗ್ಗಾದ ಮರ್ಕಲ್‌ನಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಶೃಂಗೇರಿ ಮಾತನಾಡಿ, “ಭವಿಷ್ಯದ ಆತಂಕದ ದಿನಗಳು ಇಂದು ಕೆರೆಕಟ್ಟೆ ರೂಪದಲ್ಲಿ ನಮ್ಮ ಕಣ್ಣಿಗೆ ಕಾಣಿಸುತ್ತಿವೆ. ಕೆರೆಕಟ್ಟೆ ಐಸಿಯು ಸ್ಥಿತಿಯಲ್ಲಿ ಇದ್ದರೆ ಹೊರಗಿನ ಊರುಗಳು ಸೆಮಿ ಐಸಿಯು ಸ್ಥಿತಿಗೆ ತಲುಪಿವೆ. ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಇಡೀ ಮಲೆನಾಡಿನ ಪರಿಸ್ಥಿತಿ ಶೋಚನೀಯವಾಗಲಿದೆ. ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಮಲೆನಾಡಿಗರ ಬದುಕನ್ನು ಉಳಿಸುವ ನಿಟ್ಟಿನಲ್ಲಿ ಈ ಯಾತ್ರೆ ಆರಂಭಿಸಲಾಗಿದೆ. ಹತ್ತಾರು ಮಾರಕ ಅರಣ್ಯ ಕಾಯ್ದೆಗಳು ಹಾಗೂ ಅವುಗಳ ಅವೈಜ್ಞಾನಿಕ ಅನುಷ್ಠಾನದಿಂದ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಸೆಕ್ಷನ್ 4ನ್ನು 17ಕ್ಕೆ ಪರಿವರ್ತಿಸುವಾಗ ನೈಸರ್ಗಿಕ ನ್ಯಾಯ ಪಾಲನೆ ಆಗದೆ ರೈತರು ಮತ್ತು ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ಎಸ್‌ಐಟಿ ರಚನೆಯಿಂದ ಈಗಾಗಲೇ ದಾಖಲೆ ಹೊಂದಿರುವ ಭೂಮಿಗೂ ಕುತ್ತು ಬರುವ ಆತಂಕವಿದೆ. ಕಾಡಾನೆ ದಾಳಿಯಿಂದ ರೈತರು ಕೃಷಿ ತೋಟಕ್ಕೆ ಹೋಗಲು ಹೆದರುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ವಿರುದ್ಧ ಜಾಗೃತರಾಗಿ ನಮ್ಮ ಹಕ್ಕುಗಳನ್ನು ಕೇಳಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಆದರ್ಶ, ಅಶ್ವಿನ್, ಸುಭಾಷ್, ಕಿರಣ್, ಸಚಿನ್, ಸಂತೋಷ್, ರವಿ, ಅನಿರುದ್ದ್, ಮಂಜುನಾಥ್, ಮಂಜುನಾಥ್ ಯಡದಾಳ್, ನೂತನ್ ಕುಮಾರ್, ರಾಜಕುಮಾರ್ ಹೆಗ್ಡೆ, ಶ್ರೀಧರ್, ಸಂತೃಪ್ತ್, ಆಶಿಕ್, ದಿವೀರ್ ಮಲ್ನಾಡ್, ಸುಭಾಷ್ ಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















