ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಏಕಾಏಕಿ ಬಾಣಂತಿಯೊಬ್ಬರಿಗೆ ಕಾಲು ನೋವು ಕಂಡು ಬಂದಿದ್ದು ಕುಟುಂಬಸ್ಥರು ಆಂಬ್ಯುಲೆನ್ಸ್ ಗೆ ಕರೆ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಆದರೆ ನೆಟ್ವರ್ಕ್ ಸಮಸ್ಯೆಯಿಂದ ಸಿಗಲಿಲ್ಲ. ಕಾರಿನಲ್ಲಿ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದ ಪೋಸ್ಟ್ ಮಾಸ್ಟರ್ ಮಂಜುನಾಥ್ ಅವರ ಪತ್ನಿ ಕಾವ್ಯ (29) ಮೃತಪಟ್ಟ ದುರ್ದೈವಿ. ಹೆರಿಗೆಯ ನಂತರ ಕಾವ್ಯ ಅವರು ಕೋಣಂದೂರು ಸಮೀಪದ ದೆಮ್ಲಾಪುರದಲ್ಲಿರುವ ತವರು ಮನೆಯಲ್ಲಿದ್ದರು. ಆದರೆ, ಜನವರಿ 1ರಂದು ಅವರಿಗೆ ಜನಿಸಿದ ಮಗು ಕೂಡ ಸಾವನ್ನಪ್ಪಿತ್ತು. ಮಗುವಿನ ಸಾವಿನಿಂದ ಕಾವ್ಯ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ತೀವ್ರ ಕುಗ್ಗಿದ್ದರು ಎಂದು ಹೇಳಲಾಗಿದೆ.
ಕಾವ್ಯ ಅವರಿಗೆ ತೀವ್ರ ಕಾಲು ನೋವು ಕಾಣಿಸಿಕೊಂಡ ತಕ್ಷಣ, ಕುಟುಂಬಸ್ಥರು ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ದೆಮ್ಲಾಪುರ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದ ಕಾರಣ ಆಂಬುಲೆನ್ಸ್ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಸಮಯ ವ್ಯರ್ಥವಾಗಬಾರದೆಂದು ಕುಟುಂಬದವರು ತಕ್ಷಣವೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆ ತಲುಪುವ ಮೊದಲೇ ಕಾವ್ಯ ಸಾವನ್ನಪ್ಪಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಮಗುವಿನ ಬೆನ್ನಲ್ಲೇ ತಾಯಿಯೂ ಮೃತಪಟ್ಟಿರುವುದು ಇಡೀ ಮೇಳಿಗೆ ಮತ್ತು ದೆಮ್ಲಾಪುರ ಗ್ರಾಮಗಳಲ್ಲಿ ಮೌನ ಆವರಿಸುವಂತೆ ಮಾಡಿದೆ.












