ಎನ್.ಆರ್.ಪುರ: (ನ್ಯೂಸ್ ಮಲ್ನಾಡ್ ವರದಿ) ಹಸುವೊಂದು ತೋಟಕ್ಕೆ ನುಗ್ಗಿ ಕಾಫಿ ಹಾಗೂ ಬಾಳೆ ಗಿಡಗಳನ್ನು ಹಾಳುಮಾಡಿದ ವಿಚಾರವನ್ನು ಪ್ರಶ್ನಿಸಿದ ದಂಪತಿ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿರುವ ಆರೋಪ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ.
ನೆರೆಮನೆಯ ಶಶಿಕಿರಣ್ ಎಂಬಾತ ದಂಪತಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಲಾಗಿದೆ.

ಹಸು ಪ್ರತಿನಿತ್ಯ ನೆರೆಮನೆಯವರ ತೋಟಕ್ಕೆ ನುಗ್ಗಿ ಕಾಫಿ ಹಾಗೂ ಬಾಳೆ ಗಿಡಗಳನ್ನು ತಿಂದು ಹಾನಿಗೊಳಿಸುತ್ತಿತ್ತು ಎನ್ನಲಾಗಿದೆ. ಇದನ್ನು ಕಂಡು ಹಸುವನ್ನು ಓಡಿಸಲು ದಂಪತಿ ಮುಂದಾದಾಗ ಶಶಿಕಿರಣ್ ಆಕ್ರೋಶಗೊಂಡು ಗಲಾಟೆ ಆರಂಭಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಳಿಕ, ಕೈಯಲ್ಲಿ ಕತ್ತಿ ಹಾಗೂ ದೊಣ್ಣೆ ಹಿಡಿದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಕತ್ತಿಯಿಂದ ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯ ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದ್ದು, ದೊಣ್ಣೆಯಿಂದ ಬೆನ್ನು ಹಾಗೂ ಕಾಲಿಗೆ ಹೊಡೆದಿದ್ದಾನೆ. ಅಲ್ಲದೆ ಜಗಳ ಬಿಡಿಸಲು ಬಂದ ಹೆಂಡತಿ ಮೇಲೆಯೂ ದೊಣ್ಣೆಯಿಂದ ಹಲ್ಲೆ ನಡೆಸಿ ಕೈ ಹಾಗೂ ಬೆನ್ನಿಗೆ ಗಾಯಪಡಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













