
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿರುವ ಕೋಳಿ ಫಾರಂ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ, ಕೃಷಿ ಉದ್ದೇಶಕ್ಕೆ ಮೀಸಲಾಗಿದ್ದ ಯೂರಿಯಾವನ್ನು ಅಕ್ರಮವಾಗಿ ಸಂಗ್ರಹಿಸಿ ರೀ-ಪ್ಯಾಕಿಂಗ್ ಮಾಡುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ.
ಕೃಷಿ ಇಲಾಖೆ ಅಧಿಕಾರಿ ತಿರುಮಲೇಶ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಒಟ್ಟು 399 ಚೀಲ ಯೂರಿಯಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 181 ಮೂಲ ಯೂರಿಯಾ ಚೀಲಗಳು ಹಾಗೂ ಅಕ್ರಮವಾಗಿ ಮರುಪ್ಯಾಕ್ ಮಾಡಲಾಗಿದ್ದ 218 ಚೀಲಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿಗೆ ಮೀಸಲಾದ ಯೂರಿಯಾವನ್ನು ಕೈಗಾರಿಕಾ ಉದ್ದೇಶಗಳಿಗೆ ಬಳಸಲು ರೀ-ಪ್ಯಾಕಿಂಗ್ ಮಾಡಲಾಗುತ್ತಿತ್ತು ಎಂಬುದು ದಾಳಿಯ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೋಳಿ ಫಾರಂ ಮಾಲೀಕ ರಾಜೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.















