ನರಸಿಂಹರಾಜಪುರ: (ನ್ಯೂಸ್ ಮಲ್ನಾಡ್ ವರದಿ) ನಕಲಿ ಛಾಪಾ ಕಾಗದಗಳನ್ನು ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚನೆ ಎಸಗಿದ ಆರೋಪದ ಮೇಲೆ ಡಿಜಿಟಲ್ ಸಂಸ್ಥೆ ಮತ್ತು ಗುತ್ತಿಗೆದಾರರ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ನರಸಿಂಹರಾಜಪುರ ಉಪವಿಭಾಗದ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಹಾಗೂ ಟಾಸ್ಕ್ಪೋರ್ಸ್ ಯೋಜನೆಯಡಿ ಕೊಳವೆಬಾವಿ ಕಾಮಗಾರಿಗಳನ್ನು ನಿರ್ವಹಿಸಲು ಗುತ್ತಿಗೆದಾರರು ಮತ್ತು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನಡುವೆ ಕರಾರು ಪತ್ರದ ಮೂಲಕ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಈ ಕುರಿತು 2026ರ ಮಾರ್ಚ್ ತಿಂಗಳಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಡಿ.ಎನ್. ಜೀವರಾಜ್, ಕೊಳವೆಬಾವಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ನಕಲಿ ಛಾಪಾ ಕಾಗದಗಳನ್ನು ಬಳಸಿ ಕರಾರು ಒಪ್ಪಂದ ಮಾಡಿಕೊಂಡಿರುವ ಆರೋಪವನ್ನು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಇಲಾಖೆಯ ಎಂಜಿನಿಯರ್ಗಳು ದಾಖಲೆಗಳನ್ನು ಪರಿಶೀಲಿಸಿದಾಗ, ಒಟ್ಟು 14 ಛಾಪಾ ಕಾಗದಗಳು ಪುನರಾವರ್ತನೆಯಾಗಿರುವುದು ಬೆಳಕಿಗೆ ಬಂದಿದೆ. ಕೆಲವು ಛಾಪಾ ಕಾಗದಗಳು ಆರು ಬಾರಿ ಹಾಗೂ ಕೆಲವು ಎರಡು ಬಾರಿ ಬಳಕೆಯಾಗಿರುವುದು ಕಂಡುಬಂದಿದೆ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುನಿಲ್ಕುಮಾರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಕರಾರು ಪತ್ರಗಳನ್ನು ನೀಡಿರುವ ಆಯಿರಾ ಡಿಜಿಟಲ್ ಸಂಸ್ಥೆ ಹಾಗೂ ಕರಾರು ಒಪ್ಪಂದ ಮಾಡಿಕೊಂಡಿರುವ ಎಸ್ಕೆಪಿ ಕನ್ಸ್ಟ್ರಕ್ಷನ್ ಆ್ಯಂಡ್ ಬೋರ್ವೆಲ್ ಗುತ್ತಿಗೆದಾರರ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.












