ಉಡುಪಿ-ಚಿಕ್ಕಮಗಳೂರು ಕ್ಷೇತ್ರದ 18 ರಸ್ತೆಗಳಿಗೆ ₹119 ಕೋಟಿ ಅನುದಾನ: ಶೀಘ್ರವೇ ಕಾಮಗಾರಿ ಆರಂಭ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿವಿಧ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರದ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಒಟ್ಟು ₹119 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ಅನುದಾನದಡಿ ಕ್ಷೇತ್ರದ 18 ಪ್ರಮುಖ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ (PWD) ರಸ್ತೆಗಳ ಅಭಿವೃದ್ಧಿ ಹಾಗೂ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಬಾಳೆಹೊನ್ನೂರು-ಶೃಂಗೇರಿ ರಸ್ತೆಗೆ ₹50 ಕೋಟಿ ಅನುದಾನ ಮಂಜೂರಾಗಿದೆ.

ಇದಲ್ಲದೆ, ಕೊಪ್ಪ-ಜಯಪುರ-ಶೃಂಗೇರಿ ರಸ್ತೆ, ಕುಂದಾಪುರ-ಬೈಂದೂರು-ವಿರಾಜಪೇಟೆ ರಸ್ತೆ, ಉಡುಪಿ-ಹಿರಿಯಡ್ಕ-ಕಾರ್ಕಳ-ಸುಬ್ರಹ್ಮಣ್ಯ ರಸ್ತೆ, ಕಡೂರು ತಾಲೂಕಿನ ಬೇಗೂರು ಗೇಟ್-ಅರೇಹಳ್ಳಿ-ಮಚ್ಚೇರಿ ರಸ್ತೆ, ಚಿಕ್ಕಮಗಳೂರು ತಾಲೂಕಿನ ಸೀತಾಲಯ್ಯನಗಿರಿ-ಮುಳ್ಳಯ್ಯನಗಿರಿ ರಸ್ತೆ, ಮೂಡಿಗೆರೆ ತಾಲೂಕಿನ ಬಾಳೂರು ಹ್ಯಾಂಡ್ ಪೋಸ್ಟ್‌ನಿಂದ ಕಳಸ ರಸ್ತೆ ಹಾಗೂ ತರೀಕೆರೆ ತಾಲೂಕಿನ ರಾಜ್ಯ ಹೆದ್ದಾರಿ-57ರ ಅಭಿವೃದ್ಧಿಗೆ ತಲಾ ₹6 ಕೋಟಿ ಅನುದಾನ ಮಂಜೂರಾಗಿದೆ.

ಬ್ರಹ್ಮಾವರ-ಜನ್ನಾಡಿ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ಬಾರ್ಕೂರು ರಸ್ತೆ ಅಭಿವೃದ್ಧಿಗೆ ₹10 ಕೋಟಿ, ಶಿರೂರು-ಕೊಕ್ಕರ್ಣೆ-ಸಂತೆಕಟ್ಟೆ ರಸ್ತೆಗೆ ₹3 ಕೋಟಿ ಹಾಗೂ ತೀರ್ಥಹಳ್ಳಿಯಿಂದ ಕುಂದಾಪುರ ರಸ್ತೆಗೆ ₹2 ಕೋಟಿ ಅನುದಾನ ಮಂಜೂರಾಗಿದೆ.

ಇದರ ಜೊತೆಗೆ ಹಳೆ ಎಂ.ಬಿ.ಸಿ ರಸ್ತೆ, ಆರೂರು-ಮಣ್ಣಿನಜಡ್ಡು-ಕೊಕ್ಕರ್ಣೆ ರಸ್ತೆ, ಮುನಿಯಾಲು-ಕಬ್ಬಿನಾಲೆ ರಸ್ತೆ, ಅತ್ರಾಡಿ-ಮಂಗಳೂರು ರಸ್ತೆ, ಕುಂಟಾಡಿ-ಹಳೆಕಟ್ಟೆ-ಕೆಮ್ಮಣ್ಣು ಎಂ.ಡಿ.ಆರ್ ರಸ್ತೆ ಹಾಗೂ ನಾರಾವಿ-ಮಂಗಳೂರು ರಸ್ತೆ ಸೇರಿದಂತೆ ಹಲವು ರಸ್ತೆಗಳಿಗೆ ವಿಶೇಷ ಅನುದಾನ ಒದಗಿಸಲಾಗಿದೆ.

ಈ ಎಲ್ಲಾ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

“ಕ್ಷೇತ್ರದ ಜನತೆಗೆ ಗುಣಮಟ್ಟದ ಹಾಗೂ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಮನವಿಗಳಿಗೆ ಸಕಾಲದಲ್ಲಿ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.