ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ದಾಳಿಯಿಂದ ಕಾರ್ಮಿಕರೊಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಪುರ ಗ್ರಾಮದಲ್ಲಿ ನಡೆದಿದೆ. ಗಣಪತಿ (41) ಕಾಡಾನೆ ದಾಳಿಗೆ ಒಳಗಾದ ಕಾರ್ಮಿಕ.
ಗಣಪತಿ ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದವರು. ಚಿಕ್ಕಮಗಳೂರು ತಾಲೂಕಿನ ಪುರ ಗ್ರಾಮದ ಜಗನ್ನಾಥ್ ಎಂಬುವರ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿ ಕಾಲಿನಿಂದ ತುಳಿದಿದೆ. ಪರಿಣಾಮ ಗಣಪತಿ ಅವರ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿ ಸೌಲಭ್ಯ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಮಿತಿಮೀರಿದ ಕಾಡಾನೆ ಹಾವಳಿ:
ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ದಾಳಿಗೆ ಹಲವು ಜೀವ ಹಾನಿಯಾಗಿದೆ. ಬಾಳೆಹೊನ್ನೂರು, ನರಸಿಂಹರಾಜಪುರ, ಖಾಂಡ್ಯ, ಕೊಪ್ಪ, ಮೂಡಿಗೆರೆ ಭಾಗದ ಜನರು ಕಾಡಾನೆ ಹಾವಳಿಯಿಂದ ತತ್ತರಿಸಿ ಹೋಗಿದ್ದು, ಜೀವಭಯದಿಂದ ಕೃಷಿ ತೋಟಗಳಿಗೆ ಹೋಗುವ ಪರಿಸ್ಥಿತಿ ಉದ್ಭವಿಸಿದೆ. ಜಿಲ್ಲೆಯ ಅಲ್ಲಲ್ಲಿ ಭಾರಿ ಪ್ರಮಾಣದಲ್ಲಿ ಕಾಡಾನೆ ಹಾವಳಿ ಇದ್ದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ ಎಂಬುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಾಡಾನೆ ದಾಳಿಯಿಂದ ಜೀವ ಹಾನಿಗೆ ಪರಿಹಾರದ ಚೆಕ್ ಮತ್ತು ಸುಳ್ಳು ಭರವಸೆ ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: 10 HP ವರೆಗಿನ ಕೃಷಿ ಪಂಪ್ ಸೆಟ್ ಗಳಿಗೆ ಸಿಗಲಿದೆ ಸಬ್ಸಿಡಿ
ಮನುಷ್ಯನ ಜೀವನದಲ್ಲಿ ಆಟವಾಡುತ್ತಿರುವ ಕಾಡಾನೆಗಳಿಗೆ ಕಡಿವಾಣ ಹಾಕುವವರು ಯಾರು ಎನ್ನುವ ಯಕ್ಷ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದ್ದು, ಕಾಡಾನೆ ದಾಳಿಯಿಂದ ಅಮಾಯಕರು ಮೃತಪಟ್ಟಾಗ ಮಾತ್ರ ಸ್ಥಳಕ್ಕೆ ಬರುವ ಜನಪ್ರತಿನಿಧಿಗಳು ಮೃತ ಕುಟುಂಬಕ್ಕೆ ಪರಿಹಾರ ನೀಡಿ ಸಾಂತ್ವನ ಹೇಳುವುದನ್ನು ಬಿಟ್ಟರೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












