ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಆಟೋ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ನಿಯಂತ್ರಣ ತಪ್ಪಿದ ರಿಕ್ಷಾ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ (ಡಿವೈಡರ್) ಡಿಕ್ಕಿ ಹೊಡೆದು ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ತಾಲೂಕಿನ ನಾಲೂರು ಸಮೀಪ ಸಂಭವಿಸಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಸಮೀಪವಿರುವ ಶಬರಿ ಹೋಟೆಲ್ ಮಾಲೀಕರಾದ ಸುದರ್ಶನ್ ಮತ್ತು ಅವರ ಕುಟುಂಬದವರು ಉಡುಪಿ ಜಿಲ್ಲೆಯ ಹೆಬ್ರಿ ಸಮೀಪವಿರುವ ತಮ್ಮ ಸಂಬಂಧಿಕರ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ತೀರ್ಥಹಳ್ಳಿಗೆ ಆಟೋದಲ್ಲಿ ಬರುತ್ತಿದ್ದಾಗ, ನಾಲೂರು ಸಮೀಪ ಅಪಘಾತ ಸಂಭವಿಸಿದೆ.

ಆಟೋದ ಬಲಭಾಗದಲ್ಲಿ ಕುಳಿತಿದ್ದ ನಿಶ್ಚಿತಾ ಶೆಟ್ಟಿ (27) ಅವರು ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಟೋದಲ್ಲಿದ್ದ ಹೋಟೆಲ್ ಮಾಲೀಕ ಸುದರ್ಶನ್ (35) ಹಾಗೂ ಏಳು ವರ್ಷದ ಬಾಲಕ ಸಂಚಿತ್ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣವೇ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತಕ್ಕೆ ಆಟೋ ಚಾಲಕನ ಬೇಜವಾಬ್ದಾರಿತನವೇ ಕಾರಣ ಎಂದು ಹೇಳಲಾಗಿದ್ದು, ಆತನ ವಿರುದ್ಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













