ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಶ್ರೀಗಂಧ ಬೆಳೆಗಾರರೊಬ್ಬರು ಸರ್ಕಾರಿ ವ್ಯವಸ್ಥೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಜಮೀನು ಕಳೆದುಕೊಂಡಿರುವ ರೈತ ವಿಷುಕುಮಾರ್ ಅವರು, ತಾವು ಬದುಕಿದ್ದಾಗಲೇ ತಮ್ಮ ವೈಕುಂಠ ಸಮಾರಾಧನೆ ಆಯೋಜಿಸಿ ಅದಕ್ಕೆ ಅಧಿಕಾರಿಗಳಿಗೆ ಆಹ್ವಾನ ನೀಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಫೆಬ್ರವರಿ 9ರಂದು ಬೆಳಿಗ್ಗೆ 10 ಗಂಟೆಗೆ ಸಂತಾಪ ಸಭೆ ಹಾಗೂ ಮಧ್ಯಾಹ್ನ 1 ಗಂಟೆಗೆ ತಿಥಿ ಊಟವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಹ್ವಾನ ಪತ್ರಿಕೆ ರವಾನಿಸಲಾಗಿದೆ. ಇದು ಸರ್ಕಾರಿ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ವಿಷುಕುಮಾರ್ ಅವರ ಫಲವತ್ತಾದ ಕೃಷಿ ಭೂಮಿ ಹಾಗೂ ಬೆಲೆಬಾಳುವ ಶ್ರೀಗಂಧದ ಮರಗಳು ಸ್ವಾಧೀನಕ್ಕೆ ಒಳಗಾಗಿವೆ. ಆದರೆ ಪರಿಹಾರ ನಿಗದಿಯಲ್ಲಿ ತೀವ್ರ ಅನ್ಯಾಯವಾಗಿದೆ ಎಂದು ರೈತ ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಮಾವಿನ ಮರಕ್ಕೆ 63 ಸಾವಿರ ರೂ., ತೆಂಗಿನ ಮರಕ್ಕೆ 37 ಸಾವಿರ ರೂ., ನಿಂಬೆ ಮರಕ್ಕೆ 3,480 ರೂ. ಹಾಗೂ ಬೇವಿನ ಮರಕ್ಕೆ 2,200 ರೂ. ಪರಿಹಾರ ನೀಡಿದ್ದರೆ, ಅತ್ಯಂತ ದುಬಾರಿ ಮೌಲ್ಯದ ಶ್ರೀಗಂಧದ ಮರಕ್ಕೆ ಕೇವಲ 420 ರೂ. ಮಾತ್ರ ನಿಗದಿಪಡಿಸಲಾಗಿದೆ.
ಈ ಅನ್ಯಾಯದಿಂದ ಆಕ್ರೋಶಗೊಂಡಿರುವ ವಿಷುಕುಮಾರ್ ಅವರು, ತಮ್ಮ ನೋವನ್ನು ವಿಭಿನ್ನ ರೀತಿಯಲ್ಲಿ ಹೊರಹಾಕಲು ಈ ವಿನೂತನ ಪ್ರತಿಭಟನೆಯ ಮಾರ್ಗವನ್ನು ಆರಿಸಿಕೊಂಡಿದ್ದಾರೆ.












