ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ವಿದ್ಯುತ್ ಶಾಕ್ ತಗುಲಿ ಕಾಡಾನೆಯೊಂದು ಮೃತಪಟ್ಟಿದೆ. ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ಆಕರ್ಷಕ ದಂತಗಳನ್ನು ಹೊಂದಿದ್ದ ಗಂಡಾನೆಯ ಮೃತದೇಹ ಪತ್ತೆಯಾಗಿದೆ.
ಸಾಮಾನ್ಯವಾಗಿ ಸುರಕ್ಷಿತವಾಗಿರಬೇಕಾದ ಮೀಸಲು ಅರಣ್ಯದೊಳಗೆ ವಿದ್ಯುತ್ ಸಂಪರ್ಕ ಹೇಗೆ ಬಂತು ಎಂಬುದು ಸದ್ಯ ದಟ್ಟ ಅನುಮಾನಗಳಿಗೆ ಕಾರಣವಾಗಿದ್ದು, ವನ್ಯಜೀವಿ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಆನೆ ಸಾವನ್ನಪ್ಪಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಆನೆಯ ಸಾವಿಗೆ ವಿದ್ಯುತ್ ಶಾಕ್ ತಗುಲಿರುವುದೇ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಸದ್ಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಪಂಚನಾಮೆ ನಡೆಸಿ, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

ಕಾಡಿನ ಮಧ್ಯೆ ವಿದ್ಯುತ್ ಲೈನ್ ಹಾದುಹೋಗಿದೆಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದರೇ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ತೀವ್ರ ತನಿಖೆ ಆರಂಭಿಸಿದ್ದಾರೆ. ಅರಣ್ಯದ ಅಂಚಿನಲ್ಲಿ ಇಂತಹ ಘಟನೆ ನಡೆದಿರುವುದು ಮತ್ತು ಆನೆ ಸಾವನ್ನಪ್ಪಿರುವುದು ಸ್ಥಳೀಯ ಜನರಲ್ಲಿ ಚರ್ಚೆಗೆ ಕಾರಣವಾಗಿದೆ.













