
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಆರೋಗ್ಯ ಸೇವೆಯಲ್ಲಿ ಹೊಸ ಅಧ್ಯಾಯವನ್ನು ತೆರೆದಿರುವ ಶೃಂಗೇರಿ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಫೇಸ್ಬುಕ್‌ನಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್ ಆಸ್ಪತ್ರೆಯ ಸೇವೆ, ಸೌಲಭ್ಯಗಳು ಹಾಗೂ ಶೃಂಗೇರಿ ಮಠದ ಸಮಾಜಮುಖಿ ಕಾರ್ಯಗಳನ್ನು ವಿಶ್ಲೇಷಿಸಿ ಜನರ ಗಮನ ಸೆಳೆದಿದೆ.
ವೈರಲ್ ಪೋಸ್ಟ್‌ನಲ್ಲಿ, “ಇಲ್ಲಿವರೆಗೆ ಮಲೆನಾಡಿನ ಜನರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಮಣಿಪಾಲ, ಉಡುಪಿ, ಮಂಗಳೂರು ಕಡೆಗೆ ತೆರಳಬೇಕಾಗುತ್ತಿತ್ತು. ತೀರ್ಥಹಳ್ಳಿಯಲ್ಲೂ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಕಳುಹಿಸಲಾಗುತ್ತಿತ್ತು. ಆದರೆ ಈಗ ಶೃಂಗೇರಿಯಲ್ಲೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಿರುವುದು ದೊಡ್ಡ ಬದಲಾವಣೆಯಾಗಿದೆ” ಎಂದು ಉಲ್ಲೇಖಿಸಲಾಗಿದೆ.

ಪೋಸ್ಟ್‌ನಲ್ಲಿ ಆಸ್ಪತ್ರೆಯ ಒಳಾಂಗಣ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು ಹಾಗೂ ಕಡಿಮೆ ವೆಚ್ಚದಲ್ಲಿ ದೊರೆಯುವ ಚಿಕಿತ್ಸೆಯ ಬಗ್ಗೆ ವಿಶೇಷವಾಗಿ ಪ್ರಶಂಸಿಸಲಾಗಿದೆ. “ಆಸ್ಪತ್ರೆ ನೋಡಿ ಅಚ್ಚರಿ ಆಯಿತು. ಉತ್ತಮ ವೈದ್ಯರು ಸೇವೆ ನೀಡುತ್ತಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿ ನಡೆಯುತ್ತಿದ್ದು, ಭವಿಷ್ಯದಲ್ಲಿ ಇದು ಇನ್ನಷ್ಟು ದೊಡ್ಡದಾಗಲಿದೆ” ಎಂಬ ಮಾತುಗಳು ಜನರಲ್ಲಿ ವಿಶ್ವಾಸ ಮೂಡಿಸಿವೆ.
ಇದರ ಜೊತೆಗೆ ಶೃಂಗೇರಿ ಮಠದ ಇತರೆ ಸಮಾಜಮುಖಿ ಕಾರ್ಯಗಳನ್ನೂ ಪೋಸ್ಟ್‌ನಲ್ಲಿ ಕೊಂಡಾಡಲಾಗಿದೆ. ಭಾರತೀತೀರ್ಥರ 75ನೇ ವರ್ಧಂತಿ ಪ್ರಯುಕ್ತ 75 ಜನರಿಗೆ ಆಟೋ ರಿಕ್ಷಾಗಳ ವಿತರಣೆ, ದಿನನಿತ್ಯ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ, ಮತ್ತು ಪ್ರಚಾರವಿಲ್ಲದೆ ನಡೆಯುತ್ತಿರುವ ವಿವಿಧ ಸೇವಾ ಕಾರ್ಯಕ್ರಮಗಳು ಜನಮನ ಗೆದ್ದಿವೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕರು ಶೃಂಗೇರಿ ಮಠದ ಕಾರ್ಯಪದ್ಧತಿಯನ್ನು ಶ್ಲಾಘಿಸಿ ಕಾಮೆಂಟ್‌ಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಟ್ಟಾರೆ, ಶೃಂಗೇರಿ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಲೆನಾಡಿನ ಜನರಿಗೆ ಸಮೀಪದಲ್ಲೇ ಉತ್ತಮ ಆರೋಗ್ಯ ಸೇವೆ ನೀಡುವ ನಂಬಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಾಡುತ್ತಿದೆ.














