
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಫಾರಂ–7 ಅನ್ನು ದುರ್ಬಳಕೆ ಮಾಡಿಕೊಂಡು ನಿರ್ದಿಷ್ಟ ಸಮುದಾಯದ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಅಳಿಸಲು ಪ್ರಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಪೊಲೀಸ್ ಠಾಣೆಗಳಿಗೂ ದೂರು ನೀಡಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬಣಕಲ್ ಹೋಬಳಿ ಮೀಲಾದ್ ಟ್ರಸ್ಟ್ (ರಿ.) ನೇತೃತ್ವದಲ್ಲಿ ಮಂಗಳವಾರ ಮೂಡಿಗೆರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಜಾಕೀರ್ ಹುಸೈನ್, ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದೆ. ಇಂತಹ ಮಹತ್ವದ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶದಿಂದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಒಂದು ಸಮುದಾಯವನ್ನೇ ಗುರಿಯಾಗಿಸಿಕೊಂಡು ಫಾರಂ–7 ಸಲ್ಲಿಸಿರುವ ಆರೋಪ ಅತ್ಯಂತ ಗಂಭೀರವಾಗಿದ್ದು, ಇದರ ಹಿಂದೆ ಯಾರೇ ಇದ್ದರೂ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು. ಮತದಾನದ ಹಕ್ಕಿನ ರಕ್ಷಣೆಗಾಗಿ ಹೋರಾಟ ನಿರಂತರವಾಗಿರಲಿದೆ ಎಂದು ಎಚ್ಚರಿಸಿದರು.

ಹಿರಿಯರಾದ ಗೌಸ್ ಮೊಹಿದ್ದಿನ್ ಬಣಕಲ್ ಮಾತನಾಡಿ, ಈ ಸಮಸ್ಯೆಯ ಕುರಿತು ಈ ಹಿಂದೆಯೇ ಹಲವು ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿವೆ. ಮೀಲಾದ್ ಟ್ರಸ್ಟ್ ವತಿಯಿಂದಲೂ ಈಗಾಗಲೇ ಎರಡು ಬಾರಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅಶ್ವಿನಿ ಅವರಿಗೆ ಪ್ರಕರಣದ ಸಂಪೂರ್ಣ ವಿವರಗಳೊಂದಿಗೆ ಮನವಿ ನೀಡಲಾಗಿದೆ. ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೂ ದೂರು ಸಲ್ಲಿಸಲಾಗಿದೆ. ಆದರೂ ಈವರೆಗೆ ಯಾವುದೇ ಪರಿಣಾಮಕಾರಿ ಕಾನೂನು ಕ್ರಮ ಕೈಗೊಂಡಿಲ್ಲ. ದೂರು ನೀಡಿದರೂ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದರು.

ಮತದಾನದ ಹಕ್ಕಿನಂತಹ ಗಂಭೀರ ವಿಚಾರದಲ್ಲಿಯೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಏಕೆ? ರಾಜಕೀಯ ಪ್ರಭಾವಕ್ಕೆ ಮಣಿದು ಅಧಿಕಾರಿಗಳು ತಮ್ಮ ಕರ್ತವ್ಯದಿಂದ ಹಿಂದೆ ಸರಿಯಬಾರದು. ಪೊಲೀಸ್ ಅಧಿಕಾರಿಗಳು ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ ಕಾನೂನು ಕ್ರಮ ಕೈಗೊಳ್ಳಬೇಕು. ಇದೇ ನಿರ್ಲಕ್ಷ್ಯ ಮುಂದುವರಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಅಯ್ಯುಬ್ ಹಾಜಿ ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಹೆಸರು ತೆಗೆದುಹಾಕುವ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು. ನಿಯಮಬದ್ಧ ಪರಿಶೀಲನೆ ಇಲ್ಲದೆ ಯಾವುದೇ ವ್ಯಕ್ತಿಯ ಮತದಾನದ ಹಕ್ಕಿಗೆ ಧಕ್ಕೆ ತರಬಾರದು. ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳು ನಡೆದಿದ್ದರೆ ಅವುಗಳನ್ನು ಕಾನೂನಾತ್ಮಕವಾಗಿ ಎದುರಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಹಸೇನ ಕೊಟ್ಟಿಗೆಹಾರ, ಕಾರ್ಯಾಧ್ಯಕ್ಷ ಹಂಝ, ಫಾರೂಕ್ ಬಣಕಲ್, ಅಕ್ಬರ್ ಆಲಿ, ಮುನಾಫ್ ಸಾಬ್, ಸಿದ್ದೀಕ್ ಕೊಟ್ಟಿಗೆಹಾರ, ಅನೀಸ್ ಹಳಿಕೆ, ಸಿದ್ದೀಕ್ ಹಳಿಕೆ, ಅಬ್ಬಾಸ್ ಕಿರುಗುಂದ, ಶಂಶುದ್ದೀನ್ ಚಕ್ಮಕ್ಕಿ, ನಝೀರ್ ಚಕ್ಮಕ್ಕಿ, ಮುಂತಾಜ್ ಹಾಜಿ ಬಣಕಲ್, ಜಾಕೀರ್ ಬಣಕಲ್, ಖಾಲೀದ್, ಕೊಟ್ಟಿಗೆಹಾರ ಮಸೀದಿಯ ಧಾರ್ಮಿಕ ಗುರುಗಳಾದ ಇಮ್ದಾನಿ, ಮೀಲಾದ್ ಟ್ರಸ್ಟ್ ಯೂತ್ ವಿಂಗ್ ಸದಸ್ಯರು, ಬಣಕಲ್ ಹೋಬಳಿಯ ಆರು ಮಸೀದಿಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. (ವರದಿ- ತನು ಕೊಟ್ಟಿಗೆಹಾರ)












