
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶ್ರೀ ಶಾರದಾ ಪೀಠಕ್ಕೆ ಭೇಟಿ ನೀಡಿದ್ದ ಭಕ್ತರೊಬ್ಬರು ಕಳೆದುಕೊಂಡಿದ್ದ ಸುಮಾರು ₹4.20 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಶ್ರೀಮಠದ ಸಿಬ್ಬಂದಿ ಹಾಗೂ ನಿವೃತ್ತ ಅಧಿಕಾರಿಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.
ಬೆಂಗಳೂರಿನ ಶಾಶ್ವತ್ ಪ್ರಧಾನ್ ಮತ್ತು ಸ್ಥಿತಾ ಪ್ರಧಾನ್ ಕುಟುಂಬ ಶನಿವಾರ ಶ್ರೀಮಠಕ್ಕೆ ಭೇಟಿ ನೀಡಿತ್ತು. ಈ ವೇಳೆ ಸೇವಾ ಚೀಟಿ ಕೌಂಟರ್‌ನಲ್ಲಿ ಚೀಟಿ ಮಾಡಿಸುವ ಸಂದರ್ಭದಲ್ಲಿ ಕೈಚೀಲದಿಂದ ತೆಗೆದಿದ್ದ ಚಿನ್ನಾಭರಣದ ಬಾಕ್ಸ್ ಅನ್ನು ಆಕಸ್ಮಿಕವಾಗಿ ಅಲ್ಲಿಯೇ ಬಿಟ್ಟು ತೆರಳಿದ್ದರು.

ಇದನ್ನು ಗಮನಿಸಿದ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಮಸಿಗೆ ಕೃಷ್ಣಪ್ಪ ಅವರು ಚಿನ್ನಾಭರಣದ ಬಾಕ್ಸ್ ಅನ್ನು ಶ್ರೀಮಠದ ಕಚೇರಿಗೆ ತಲುಪಿಸಿದ್ದರು. ಬಳಿಕ ಕಚೇರಿಯಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಚಿನ್ನಾಭರಣದ ವಾರಸುದಾರರನ್ನು ಪತ್ತೆಹಚ್ಚುವಲ್ಲಿ ಶ್ರೀಮಠದ ಆಡಳಿತ ಮಂಡಳಿ ಯಶಸ್ವಿಯಾಯಿತು.

ಆದರೆ, ಅಷ್ಟರಲ್ಲಾಗಲೇ ಶಾಶ್ವತ್ ಪ್ರಧಾನ್ ಕುಟುಂಬ ಬೆಂಗಳೂರಿಗೆ ತೆರಳಿತ್ತು. ಶ್ರೀಮಠದ ಕಚೇರಿಯಿಂದ ದೂರವಾಣಿ ಕರೆ ಬಂದ ಬಳಿಕ ತಮ್ಮ ಕೈಚೀಲವನ್ನು ಪರಿಶೀಲಿಸಿದಾಗ ಚಿನ್ನಾಭರಣದ ಬಾಕ್ಸ್ ಕಳೆದುಹೋಗಿರುವುದು ಕುಟುಂಬದವರಿಗೆ ತಿಳಿದುಬಂದಿದೆ.
ನಂತರ ಶ್ರೀಮಠಕ್ಕೆ ಆಗಮಿಸಿದ ಕುಟುಂಬದವರಿಂದ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ಬಂಗಾರದ ತಾಳಿಸರ ಹಾಗೂ ಕಿವಿಯೋಲೆಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಪ್ರಸಾದ ಭಟ್, ನಾಗರಾಜ್, ಚಂದ್ರಶೇಖರ್, ನಿವೃತ್ತ ಎಸ್ಥೆ ನಾಗೇಂದ್ರ, ಗುಪ್ತಚರ ಇಲಾಖೆಯ ನವೀನ್ ಹಾಗೂ ವಾರಸುದಾರರಾದ ಶಾಶ್ವತ್ ಪ್ರಧಾನ್ ಮತ್ತು ಸ್ಥಿತಾ ಪ್ರಧಾನ್ ಉಪಸ್ಥಿತರಿದ್ದರು.
ಶ್ರೀ ಶಾರದಾ ಪೀಠದಲ್ಲಿ ಸಿಸಿಟಿವಿ ಕಣ್ಗಾವಲು; ಭದ್ರತೆಗೆ 300ಕ್ಕೂ ಅಧಿಕ ಕ್ಯಾಮೆರಾ ಅಳವಡಿಕೆ:
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಯ ಶ್ರೀ ಶಾರದಾ ಪೀಠಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರ ಸುರಕ್ಷತೆ ವಿಶೇಷ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಶ್ರೀಮಠದ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ 300ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ನಿಗಾ ಇರಿಸಲಾಗಿದೆ.
ಮಠದ ಆವರಣ, ಭಕ್ತರ ಸಂಚಾರ ಹಾಗೂ ಪ್ರಮುಖ ಸ್ಥಳಗಳ ಮೇಲೆ ನಿಗಾ ವಹಿಸುವ ವ್ಯವಸ್ಥೆಯಿಂದ ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮತ್ತು ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಅನುಕೂಲವಾಗಿದೆ. ಶ್ರೀಮಠದ ಈ ಭದ್ರತಾ ಕ್ರಮ ಸಾರ್ವಜನಿಕರು ಹಾಗೂ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.













