ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕಗಳು, ಸಮವಸ್ತ್ರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ದಾನವಾಗಿ ನೀಡುವುದು ಉತ್ತಮ ಸಂಸ್ಕೃತಿಯಾಗಿದೆ. ಆದರೆ, ಅದನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡು ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಸಭೆ-ಸಮಾರಂಭಗಳನ್ನು ಆಯೋಜಿಸುವುದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಮುಖಂಡ ಓಣಿತೋಟ ರತ್ನಾಕರ್ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 2023ರಲ್ಲಿ ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆಯ ಮೂಲಕ ಹೊರಡಿಸಿರುವ ಆದೇಶದಂತೆ, ಸರ್ಕಾರಿ ಶಾಲೆಗಳಿಗೆ ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳು ದಾನವಾಗಿ ನೀಡುವ ವಸ್ತುಗಳನ್ನು ಶಾಲೆಯ ಮುಖ್ಯ ಶಿಕ್ಷಕರೇ ನೇರವಾಗಿ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳ ಪೋಷಕರನ್ನು ಕರೆಸಿ ಕಾರ್ಯಕ್ರಮ ನಡೆಸುವುದು, ಸರ್ಕಾರ ಅಥವಾ ಕ್ಷೇತ್ರದ ಶಾಸಕರನ್ನು ಟೀಕಿಸುವ ಭಾಷಣಗಳನ್ನು ಮಾಡುವುದು ಹಾಗೂ ಇಂತಹ ಕಾರ್ಯಕ್ರಮಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಇದು ಮತಗಳಿಗಾಗಿ ಮಾಡುವ ರಾಜಕೀಯ ಗಿಮಿಕ್ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಾಗೂ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಎಸ್.ಎನ್. ರಾಮಸ್ವಾಮಿ ಅವರು ಶಿಕ್ಷಣ ಇಲಾಖೆಯ ಆದೇಶವನ್ನು ಸಂಪೂರ್ಣವಾಗಿ ಓದಿ ಅದರ ಆಶಯವನ್ನು ತಿಳಿದುಕೊಳ್ಳಬೇಕು ಎಂದು ರತ್ನಾಕರ್ ತಿಳಿಸಿದ್ದಾರೆ.
ಇತ್ತೀಚೆಗೆ ಕಲ್ಯಾಣ ಮಂಟಪದಲ್ಲಿ ಮಕ್ಕಳ ಹಾಗೂ ಪೋಷಕರನ್ನು ಸೇರಿಸಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಾರು ಕಾರ್ಯಕ್ರಮ ನಡೆಸಿದರು ಎಂಬ ಪ್ರಶ್ನೆ ತಮ್ಮದಲ್ಲ. ಅಗತ್ಯವಿದ್ದರೆ ವಸ್ತುಗಳನ್ನು ಮನೆಗಳಿಗೆ ತಲುಪಿಸಿದರೂ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಸರ್ಕಾರಿ ಶಾಲೆಗಳಲ್ಲಿ ಸಭೆ-ಸಮಾರಂಭಗಳನ್ನು ಆಯೋಜಿಸಿ ಪೋಷಕರನ್ನು ಕರೆಸುವ ಅಧಿಕಾರ ಶಾಲೆಯ ಮುಖ್ಯ ಶಿಕ್ಷಕರಿಗೆ ಮಾತ್ರ ಇದೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಸುತ್ತೋಲೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆಯಾದರೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಕೈಗೊಂಡು ಅಮಾನತು ಮಾಡುವ ಸಾಧ್ಯತೆಯೂ ಇದೆ. ಆದ್ದರಿಂದ ಎಲ್ಲರೂ ಸರ್ಕಾರದ ಆದೇಶವನ್ನು ಗೌರವಿಸಿ ಅದರಂತೆ ನಡೆದುಕೊಳ್ಳಬೇಕು ಎಂದು ಓಣಿತೋಟ ರತ್ನಾಕರ್ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಸಭೆ ನಡೆಸಿ ವಸ್ತು ವಿತರಣೆ ಮಾಡುವುದು ಸರ್ಕಾರದ ಆದೇಶ ಉಲ್ಲಂಘನೆ: ಓಣಿತೋಟ ರತ್ನಾಕರ್













