ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕಾಣೆಯಾಗಿದ್ದ ಮಕ್ಕಳಿಬ್ಬರು ರಿಂಗ್ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ನಡೆದಿದೆ.
ಎಸ್ಟೇಟ್ ಗೆ ಬಂದಿದ್ದ ವಲಸೆ ಕಾರ್ಮಿಕ ಕುಟುಂಬವೊಂದರ 5 ವರ್ಷದ ಬಾಲಕಿ ಹಾಗೂ ಒಂದು ವರ್ಷದ ಮಗು ಇಂದು ಬೆಳಗ್ಗೆ ಕಾಣೆಯಾಗಿದ್ದು, ಸಂಜೆ ಸುಮಾರಿಗೆ ರಿಂಗ್ ಬಾವಿಯೊಂದರಲ್ಲಿ ಮಕ್ಕಳಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ.


ಕೊಪ್ಪದ ಅಮ್ಮಡಿ ಎಸ್ಟೇಟ್ ಗೆ ಮಧ್ಯಪ್ರದೇಶ ಮೂಲದ ಕುಟುಂಬವೊಂದು ಕೆಲಸಕ್ಕೆಂದು ಬಂದಿತ್ತು. ಇಂದು ಬೆಳಗ್ಗೆ ಬಟ್ಟೆ ತೊಳೆಯಲು ತಾಯಿಯೊಂದಿಗೆ ಮಕ್ಕಳು ತೆರಳಿದ್ದು, ಈ ವೇಳೆ ಆಯತಪ್ಪಿ ಬಾವಿಗೆ ಬಿದ್ದರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಪೋಷಕರ ನಿರ್ಲಕ್ಷ್ಯಕ್ಕೆ ಎರಡು ಪುಟಾಣಿ ಮಕ್ಕಳು ಜೀವ ಕಳೆದುಕೊಂಡಿವೆ.
ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಶವ ಮೇಲೆತ್ತುವ ಕಾರ್ಯಾಚರಣೆ ನಡೆದಿದ್ದು, ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












