ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರ ಶಾಸಕತ್ವವನ್ನು ಪುನಃ ಸ್ಥಾಪಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಆದರೆ ಇದೇ ವೇಳೆ ಪ್ರಕರಣದ ಮುಂದಿನ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಮೇ 21ರವರೆಗೆ ಟಿ.ಡಿ. ರಾಜೇಗೌಡರು ಶಾಸಕರಾಗಿ ಮುಂದುವರಿಯಲಿದ್ದಾರೆ. ಇದರೊಂದಿಗೆ ಡಿ.ಎನ್. ಜೀವರಾಜ್ ಮತ್ತೆ “ಮಾಜಿ ಶಾಸಕ” ಸ್ಥಾನಕ್ಕೆ ಮರಳುವಂತಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಟಿ.ಡಿ. ರಾಜೇಗೌಡರು ಜಯಗಳಿಸಿದ್ದರು. ಬಳಿಕ ಚುನಾವಣಾ ಫಲಿತಾಂಶ ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಬಳಿಕ ಅಂಚೆ ಮತಗಳ ಮರು ಎಣಿಕೆ ನಡೆದು ಅದರಲ್ಲಿ 52 ಮತಗಳಿಂದ ಡಿ. ಎನ್ ಜೀವರಾಜ್ ಜಯಗಳಿಸಿದ್ದರು. ಆದಾದ ಬಳಿಕ ಯು.ಟಿ ಖಾದರ್ ಬಳಿ ಪ್ರಮಾಣ ವಚನವನ್ನು ಕೂಡ ಪಡೆದಿದ್ದರು.


ಇದೀಗ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸೋಮವಾರ ನಡೆದ ವಿಚಾರಣೆಯಲ್ಲಿ ಟಿ.ಡಿ. ರಾಜೇಗೌಡರ ಶಾಸಕತ್ವವನ್ನು ತಾತ್ಕಾಲಿಕವಾಗಿ ಪುನಃ ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಮತ್ತೊಂದೆಡೆ ಮುಂದಿನ ವಿಚಾರಣೆಯ ಮೇಲೆಯೇ ಕ್ಷೇತ್ರದ ರಾಜಕೀಯ ಭವಿಷ್ಯ ನಿಂತಿದೆ ಎಂಬ ಚರ್ಚೆಗಳು ಜೋರಾಗಿವೆ.

ಈ ಕುರಿತು ನ್ಯೂಸ್ ಮಲ್ನಾಡ್ ನೊಂದಿಗೆ ಮಾತನಾಡಿದ ಶಾಸಕ ಟಿಡಿ ರಾಜೇಗೌಡ ‘ಸತ್ಯಕ್ಕೆ ಜಯ ಸಿಕ್ಕಿದೆ’ ಎಂದರು.
ಮೇ 21ರ ತನಕ ಯಥಾ ಸ್ಥಿತಿಗೆ ಕೋರ್ಟ್ ಆದೇಶ:
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆಗೆ ನಿರ್ದೇಶಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಟಿ.ಡಿ.ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಆ ಮರು ಏಣಿಕೆ ಆದೇಶಕ್ಕೆ ಇಂದು ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಮುಂದಿನ ವಿಚಾರಣೆಯನ್ನ ಮೇ 21ಕ್ಕೆ ಮುಂದುಡಲಾಗಿದ್ದು, ಮರು ಏಣಿಕೆ ನಂತರ ಆದ ಬೆಳವಣಿಗೆ, ಮರು ಏಣಿಕೆ ಫಲಿತಾಂಶ ವರದಿಯನ್ನ ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಪರಿಶೀಲನೆ ಮಾಡಲಿದೆ.
02-05-2026 ರ ಯಥಾ ಸ್ಥಿತಿ ಕಾಯಲು ಕೋರ್ಟ್ ಸೂಚನೆ ನೀಡಿದೆ. ಅಂದರೆ 02-05-2026 ರ ವರೆಗೆ ರಾಜೇಗೌಡ ಅವರೇ ಕ್ಷೇತ್ರದ ಶಾಸಕರಾಗಿದ್ದು 21-05-2026 ರವರೆಗೆ ಅದೇ ಸ್ಥಿತಿ ಮುಂದುವರೆಯಲಿದೆ.













