ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ ಬೆಂಕಿಗೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಒಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಸಮೀಪ ಕೆಕೋಡ್ ಎಂಬಲ್ಲಿ ಘಟನೆ ನಡೆದಿದೆ. ಈ ಬೆಂಕಿ ದುರಂತದಲ್ಲಿ ಕುಟುಂಬದ ಹಿರಿಯರಾದ ಅರ್ಚಕ ವೃತ್ತಿಯಲ್ಲಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಾವನ್ನಪ್ಪಿದ್ದಾರೆ. ಇನ್ನೋರ್ವ ಪುತ್ರ ಭರತ್ (28) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ; ಕರ್ನಾಟಕ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ; ಅರ್ಜಿ ಸಲ್ಲಿಸುವುದು ಹೇಗೆ?; ಅರಣ್ಯ ವೀಕ್ಷಕರ ಹುದ್ದೆಗೆ ವೇತನ ಎಷ್ಟು?

ಮನೆಯ ಒಳಗಿನ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯಿಲ್ಲ. ಏನಾಗಿದೆ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟತೆ ನೀಡಬೇಕಿದೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-07.10.2023
ಅರಳಸುರಳಿ ಹೊಸನಗರ ಮಾರ್ಗದಲ್ಲಿರುವ ಕೆಕೋಡ್ ಗ್ರಾಮದಲ್ಲಿ ಗ್ರಾಮಸ್ಥರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಒಂದೇ ಕುಟುಂಬದ ಮೂವರ ಸಜೀವ ದಹನ ಇಡೀ ಗ್ರಾಮವನ್ನೇ ಕಂಗೆಡಿಸಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಈ ದಿನಾಂಕದಿಂದ ಶರನ್ನವರಾತ್ರಿ ಆರಂಭ
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ನವರಾತ್ರಿ ಭಾರತದಾದ್ಯಂತ ಹಿಂದೂಗಳು ಆಚರಿಸುವ ಬಹಳ ದೊಡ್ಡ ಹಬ್ಬ. ನಮ್ಮ ರಾಜ್ಯವಾದ ಕರ್ನಾಟಕದಲ್ಲಂತೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ.
ಈ ರೀತಿಯ ದಸರಾ ಆಚರಣೆಗೆ ಮೂಲ ಪ್ರೇರಣೆ ಶೃಂಗೇರಿಯ ಶಾರದಾ ಪೀಠ ಎನ್ನುವ ಕುತೂಹಲಕಾರಿ ಸಂಗತಿ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಡೆಯುವ ವೈಭವೋಪೇತ ದಸರಾ ದರ್ಬಾರ್ ಆಚರಣೆಯ ಕುರಿತಾಗಿ ತಿಳಿಯೋಣ ಬನ್ನಿ.
18 ಶಕ್ತಿ ಪೀಠ ಇದ್ದು, ಶಂಕರಾಚಾರ್ಯರು ಸ್ಥಾಪನೆ ಮಾಡಿರುವ 4 ಆಮ್ನಾಯ ಪೀಠಗಳಲ್ಲಿ ಒಂದಾದ ಶೃಂಗೇರಿ ಶಾರದಾಂಬೆಯ ಸನ್ನಿಧಿ ಸಹ್ಯಾದ್ರಿ ಪರ್ವತಗಳ ತಪ್ಪಲಿನಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿದೆ. ತುಂಗಾ ನದಿ ತೀರದಲ್ಲಿ ವಾಸವಿರುವ ತಾಯಿ ಎಲ್ಲರ ಕಷ್ಟ ಪರಿಹರಿಸುತ್ತಿದ್ದಾಳೆ. ಮಕ್ಕಳ ವಿದ್ಯಾಭ್ಯಾಸದ ಆರಂಭಕ್ಕೂ ಮುನ್ನ ಪೋಷಕರು ತಾಯಿಯ ಆಶೀರ್ವಾದ ಪಡೆದು ಹೋಗುತ್ತಾರೆ.
ಶೃಂಗೇರಿಯಲ್ಲಿ ನವರಾತ್ರಿಯ ವೈಭವ:
ಶೃಂಗೇರಿ ದೇವಸ್ಥಾನವು ವಿದ್ಯಾಧಿದೇವತೆಯ ನೆಲವೀಡು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಲ್ಲಿ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ ನಡೆಯುತ್ತದೆ. ಇಲ್ಲಿ ಶಾರದಾ ದೇವಿ ನವರಾತ್ರಿ ಉತ್ಸವಗಳಲ್ಲಿ ಸರಸ್ವತಿ, ದುರ್ಗಾ, ಲಕ್ಷ್ಮೀ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.
ಶೃಂಗೇರಿಯಲ್ಲಿ ವಿಜೃಂಭಣೆಯಿಂದ ನಡೆಯುವ ಹಬ್ಬಗಳಲ್ಲಿ ನವರಾತ್ರಿ ಹಬ್ಬವೂ ಒಂದು. ಈ ಸುಸಂದರ್ಭದಲ್ಲಿ ಮಹಾಭಿಷೇಕ, ಶತರುದ್ರಾಭಿಷೇಕ ನಡೆಯುತ್ತದೆ. ಶಾರದೆಗೆ ಪ್ರತಿದಿನವೂ ಒಂದೊಂದು ಅಲಂಕಾರ ನಡೆಯುತ್ತದೆ. ಹಂಸವಾಹನ ಅಲಂಕಾರ, ವೃಷಭವಾಹನ ಅಲಂಕಾರ, ಮಯೂರವಾಹನ ಅಲಂಕಾರ, ಗರುಡವಾಹನ ಅಲಂಕಾರ, ಇಂದ್ರಾಣಿ ಅಲಂಕಾರ, ವೀಣಾಶಾರದಾ ಅಲಂಕಾರ, ಮೋಹಿನಿ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನ ಅಲಂಕಾರ, ಗಜಲಕ್ಷ್ಮೀ ಅಲಂಕಾರಗಳನ್ನು ಮಾಡಲಾಗುತ್ತದೆ.
ಶೃಂಗೇರಿಯಲ್ಲಿ ಅ.15 ರಿಂದ 25ರ ವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ:
ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಅಕ್ಟೋಬರ್ 15 ರಿಂದ 25 ರ ವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ನವರಾತ್ರಿಯ ಹಿಂದಿನ ದಿನ 14 ರಂದು ಭಾದ್ರಪದ ಅಮಾವಾಸ್ಯೆ ದಿನ ಜಗನ್ಮಾತೆಗೆ ಮಹಾಭಿಷೇಕ ನೆರವೇರಲಿದೆ ಶ್ರೀ ಶಾರದೆಗೆ ಆನೇಕ ವಿಧವಾದ ಫಲ-ಪಂಚಾಮೃತ ಅಭಿಷೇಕದ ನಂತರ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಸಲ ಶ್ರೀಸೂಕ್ತ ಪಠನದಿಂದ ಅಭಿಷೇಕ ನೆರವೇರಲಿದೆ. ಅಂದು ಶ್ರೀ ಶಾರದೆ ಜಗತ್ಪ್ರಸೂತಿಕಾ ಅಲಂಕಾರ ಕಂಗೊಳಿಸಲಿದ್ದಾಳೆ.
ಯಾವ ದಿನ ಯಾವುದೆಲ್ಲಾ ಅಲಂಕಾರ ಇರುತ್ತದೆ:
* ಶ್ರೀ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶಾರದೆಗೆ 15 ರಂದು ಶ್ರೀ ಶಾರದಾ ಪ್ರತಿಷ್ಠೆ, ಬ್ರಾಹ್ಮೀ ಅಲಂಕಾರ
* 16- ಹಂಸವಾಹಿನಿ
* 17- ಮಾಹೇಶ್ವರಿ
* 18- ಮಯೂರವಾಹನಾ ಅಲಂಕಾರ
* 19- ವೈಷ್ಣವೀ ಅಲಂಕಾರ, ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾರಂಭ
* 20- ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ
* 21- ಮೋಹಿನಿ ಅಲಂಕಾರ
* 22- ರಾಜರಾಜೇಶ್ವರಿ ಅಲಂಕಾರ
* 23- ಮಹಾನವಮಿ, ಸಿಂಹವಾಹನಾಲಂಕಾರ, ಶತಚಂಡಿಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, ಸಂಜೆ ವಿಜಯೋತ್ಸವ, ಶಮೀಪೂಜೆ
* 24- ವಿಜಯದಶಮಿ, ಗಜಲಕ್ಷ್ಮಿ ಅಲಂಕಾರ, ಲಕ್ಷ್ಮೀನಾರಾಯಣ ಹೃದಯಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ
* 25- ಗಜಲಕ್ಷ್ಮೀ ಅಲಂಕಾರ, ಶೀ ಶಾರದಾಂಬಾ ಮಹಾರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ನವರಾತ್ರಿ ಸಂದರ್ಭದಲ್ಲಿ ಶ್ರೀ ಮಠದಲ್ಲಿ ನಾಲ್ಕು ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವಿ ಭಾಗವತ, ದುರ್ಗಾ ಸಪ್ತಶತಿ, ವಾಲ್ಮೀಕಿ ರಾಮಾಯಣ, ಶ್ರೀ ಸೂಕ್ತ ಜಪ, ಭವನೇಶ್ವರಿ ಜಪ, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾಹರಣ ಪೂಜೆ, ಕುಮಾರೀ, ಸುವಾಸಿನೀ ಪೂಜೆ ನಡೆಯಲಿದೆ.
ನವರಾತ್ರಿ ಉತ್ಸವದ ಸಲುವಾಗಿ ರಾಜಬೀದಿಯಲ್ಲಿ ನಡೆಯುವ ರಥೋತ್ಸವ ವಿಜೃಭಣಿಯಂದ ನಡೆಯಲಿದೆ. ನಾನಾ ಪ್ರಾಂತ್ಯಗಳಿAದ ಆಗಮಿಸುವ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾ ಭಾವದಿಂದ ಪುನೀತರಾಗುತ್ತಾರೆ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಮಧು, ಕೈಟಭ, ಶುಂಭ, ನಿಶುಂಭ ಮೊದಲಾದ ಮಹಾರಾಕ್ಷಸರನ್ನು ಕೊಂದ ಜನನ್ಮಾತೆಯನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪೂಜಿಸುತ್ತಾರೆ. ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮ.
ಈ ದರ್ಬಾರ್ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಜಗದ್ಗುರುಗಳು ಶ್ರೀಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ, ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗುತ್ತಾರೆ. ಸಂಜೆ 6 ಗಂಟೆಗೆ ಶ್ರೀಮಠದ ಆವರಣದಲ್ಲಿ ದೇಶ-ವಿಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.
ಶೃಂಗೇರಿಗೆ ಹೋಗೋದು ಹೇಗೆ?:
ಶೃಂಗೇರಿಗೆ ಬೆಂಗಳೂರು, ಶಿವಮೊಗ್ಗ, ಮಂಗಳೂರಿನಿಂದ ಸರಕಾರಿ ಬಸ್ ಸೌಲಭ್ಯ ಇದೆ. ಆನ್ಲೈನ್ ಮೂಲಕ ಬುಕ್ ಮಾಡಿಸಿಕೊಳ್ಳಬಹುದು. ಕುಂದಾಪುರ ಹತ್ತಿರದ ರೈಲ್ವೇ ನಿಲ್ದಾಣ. ಅಲ್ಲಿಂದ 75 ಕಿಮೀ ದೂರ. ಸರ್ಕಾರಿ ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬಹುದು. ಶಿವಮೊಗ್ಗದ ರೈಲು ನಿಲ್ದಾಣದಿಂದ 115 ಕಿಮೀ ದೂರ. ಬೆಂಗಳೂರಿನಿಂದ 336 ಕಿಮೀ.
ಶೃಂಗೇರಿಯಲ್ಲಿ ಉಳಿದುಕೊಳ್ಳಲು ದೇವಸ್ಥಾನದ ಆಡಳಿತಕ್ಕೊಳಪಟ್ಟ ಹಾಗೂ ಖಾಸಗಿ ಗೆಸ್ಟ್ ಹೌಸ್ ಗಳಿವೆ. ಶೃಂಗೇರಿಗೆ ಹೋದರೆ ಅಲ್ಲಿಯೇ ಹತ್ತಿರದಲ್ಲಿರುವ ತೀರ್ಥಕ್ಷೇತ್ರಗಳಾದ ಕಳಸ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಗಳಿಗೂ ಹೋಗುವುದನ್ನು ಮರೆಯಬೇಡಿ.













