ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಅರಳಸುರುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲಿಸರದ ಶ್ರೀ ವನ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯ ಬೀಗ ಒಡೆದು ಕಳ್ಳತನ ಮಾಡಿದ ಘಟನೆ ಜು.22ರ ಬುಧವಾರ ಬೆಳಕಿಗೆ ಬಂದಿದೆ.
ಗರ್ಭಗುಡಿಯ ಬೀಗ ಮುರಿದು ಬಾಗಿಲು ತೆರೆದು ಶ್ರೀವನ ದುರ್ಗಾಪರಮೇಶ್ವರಿ ದೇವಿಯ ಬೆಳ್ಳಿಯ ಮುಖವಾಡ, ಮಾಂಗಲ್ಯ ಸರ ಹಾಗೂ ಇನ್ನಿತರ ಬೆಳ್ಳಿಯ ವಸ್ತುಗಳು, ಸುಮಾರು 2 ಕೆ.ಜಿಗೂ ಮಿಕ್ಕಿದ ಬೆಳ್ಳಿಯ ಪೂಜಾ ಪರಿಕರ ಹಾಗೂ ಕಾಣಿಕೆ ಹುಂಡಿ ಒಡೆದು ಕಳ್ಳರು ಹಣವನ್ನೂ ಕಳ್ಳತನ ಮಾಡಿದ್ದಾರೆ. ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರ 2 ದಿನ ಈ ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿದ್ದು, ಇದನ್ನು ಗಮನಿಸಿಯೇ ಕಳ್ಳತನ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಬುಧವಾರ ಬೆಳಿಗ್ಗೆ ಭಕ್ತರೋರ್ವರು ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ತೀರ್ಥಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಇಮ್ರಾನ್ ಬೇಗ್, ಅಪರಾಧ ಪತ್ತೆ ವಿಭಾಗದ ಸಬ್ ಇನ್ಸ್ ಪೆಕ್ಟರ್ ಸುಷ್ಮಾ ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

















