
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನಲ್ಲಿ ಗೋವುಗಳ ಕಳ್ಳತನ ಹಾಗೂ ಗೋಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗೋವುಗಳ ರಕ್ಷಣೆಯೇ ಸವಾಲಾಗಿ ಪರಿಣಮಿಸಿದೆ. ಮೇಯಲು ತೆರಳುವ ದನ, ಕರುಗಳಿಗೆ ಇಂಜೆಕ್ಷನ್ ನೀಡಿ ಅವುಗಳನ್ನು ಕಾರುಗಳಲ್ಲಿ ತುಂಬಿಕೊಂಡು ಕದ್ದೊಯ್ಯುವ ದಂಧೆ ಮಲೆನಾಡಿನ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇತ್ತೀಚೆಗೆ ಕೂತುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳೂರು ಗ್ರಾಮದಲ್ಲಿ ಹಸುವಿನ ತಲೆ ಕಡಿದು, ದೇಹವನ್ನು ಕೊಂಡೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಇಂತಹ ಕೃತ್ಯಗಳು ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿದ್ದರೂ ತಡೆಯುವವರೇ ಇಲ್ಲದಂತಾಗಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕೃತ್ಯಗಳ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ಸಹಕಾರ ಹಾಗೂ ಕುಮ್ಮಕ್ಕಿನಿಂದಲೇ ಗೋವುಗಳ ಕಳ್ಳತನ ನಡೆಯುತ್ತಿದೆಯೇ ಎಂಬ ಅನುಮಾನಗಳೂ ವ್ಯಕ್ತವಾಗಿವೆ. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಮಲಗಿರುವ ದನಗಳನ್ನು ವಾಹನಗಳಿಗೆ ತುಂಬಿಸಿಕೊಂಡು ಹೋಗುತ್ತಿರುವುದನ್ನು ಕೆಲವರು ಗಮನಿಸಿದ್ದರೂ, ಭಯದ ಕಾರಣದಿಂದ ಅಕ್ಕಪಕ್ಕದವರಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇನ್ನು ರಾತ್ರಿ ವೇಳೆ ಪೊಲೀಸ್ ಬೀಟ್ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಇದರಿಂದ ಕಳ್ಳರಿಗೆ ಅನುಕೂಲವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಹೊರವಲಯದ ಅಕ್ರವಳ್ಳಿ ಬಡಾವಣೆ, ಆನೆಗುಂದ ಸುತ್ತಮುತ್ತ ಹಾಗೂ ಮೆಣಸೆ, ಕಲ್ಕಟ್ಟೆ, ನೆಮ್ಮಾರು ಭಾಗಗಳಲ್ಲಿ ಗೋವುಗಳ ಕಳ್ಳತನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಎಲ್ಲ ಘಟನೆಗಳ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆಯ ಬಗ್ಗೆಯೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ರಾತ್ರಿ ಗಸ್ತು ಹೆಚ್ಚಿಸಬೇಕು. ಗೋವುಗಳ ಕಳ್ಳತನ ಹಾಗೂ ಅಕ್ರಮ ಚಟುವಟಿಕೆಗಳ ಹಿಂದೆ ಇರುವವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರೈತರ ಜಾನುವಾರುಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತೆಕ್ಕೂರು ಸಮೀಪದ ಗುಂಡ್ರೆ ಎಂಬಲ್ಲಿ ಹಸುವಿನ ತಲೆ ಕಡಿದು ಹಾಕಿರುವ ಘಟನೆ ಖಂಡನೀಯ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸ್ ಠಾಣೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಜರಂಗದಳ ಜಿಲ್ಲಾ ಗೋರಕ್ಷಕ ಸುನೀಲ್ ಕಿಗ್ಗಾ ಎಚ್ಚರಿಕೆ ನೀಡಿದ್ದಾರೆ.













