
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಸಮೀಪದ ದೇವದಾನ ಗ್ರಾಮದ ತೋಟದಲ್ಲಿ ಉರುಳು ಹಾಕಿ ಜಿಂಕೆಯನ್ನು ಬೇಟೆಯಾಡಿದ ಆರೋಪದಡಿ ಕುಂಬರಗೋಡಿನ ಪರಮೇಶ್ ಗೌಡ ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇನ್ನು ಮೂವರು ಪರಾರಿಯಾಗಿದ್ದಾರೆ.
ಪರಾರಿಯಾದವರನ್ನು ಕುಂಬರಗೋಡಿನ ಪೃಥ್ವಿರಾಜ್, ಕವಿಶೇಕ್ ಹಾಗೂ ವಿನಯ್ ಅಲಿಯಾಸ್ ಶಂಭು ಎಂದು ಗುರುತಿಸಲಾಗಿದೆ.
ಪರಮೇಶ್ ಗೌಡನ ಮನೆಯಲ್ಲಿ ಜಿಂಕೆ ಮಾಂಸ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ನಾಲ್ವರು ಸೇರಿ ಉರುಳು ಹಾಕಿ ಜಿಂಕೆಯನ್ನು ಬೇಟೆಯಾಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಬಳಿಕ ಶ್ವಾನದಳದೊಂದಿಗೆ ಕುಂಬರಗೋಡಿನಲ್ಲಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಪೃಥ್ವಿರಾಜ್ ಮನೆಯ ಹಿಂಭಾಗದಲ್ಲಿರುವ ತೊಟ್ಟಿಲಗುಂಡಿಯಲ್ಲಿ ಬೇಟೆಯಾಡಿದ ಜಿಂಕೆಯ ಚರ್ಮ, ಕಾಲು ಹಾಗೂ ಇತರ ಭಾಗಗಳು ಪತ್ತೆಯಾಗಿವೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಎಫ್ ಮೋಹನ್ ಕುಮಾರ್, ಪ್ರಭಾರ ಆರ್ಎಫ್ಒ ವಿದ್ಯಾಶ್ರೀ, ರಜಿತ್, ಶಿವಕುಮಾರ್, ಶಿವಶಂಕರ್, ದೀಕ್ಷಿತ್, ನಾಗರಾಜ್ ಹಾಗೂ ಯೋಗಾನಂದಮೂರ್ತಿ ಭಾಗವಹಿಸಿದ್ದರು.













