ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾವೇರಿ ಬಸ್ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಿಳಗುಳದಲ್ಲಿ ನಡೆದಿದೆ.

ಬೆಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ಪ್ರತಿ ನಿತ್ಯ ಸಂಚರಿಸುತ್ತಿದ್ದ ಕಾವೇರಿ ಬಸ್ ಬೆಳೆಗ್ಗಿನ ಜಾವ ಮೂಡಿಗೆರೆಯ ಬಿಳಗುಳ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡು ವಿದ್ಯುತ್ ಕಂಬ ತುಂಡಾಗಿ, ಬಸ್ ಜಖಂಗೊಂಡಿದೆ. ಬಸ್ಸಿನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಸ್ಥಳಕ್ಕೆ ಶೌರ್ಯ ವಿಪತ್ತು ನಿರ್ವಹಣಾ ತಂಡ ಮೂಡಿಗೆರೆ ಮತ್ತು 112 ಧಾವಿಸಿ ಸ್ಪಂದಿಸಿದ್ದಾರೆ.


ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ- ತನು ಕೊಟ್ಟಿಗೆಹಾರ
Balehonnur | ಕಾಂಬೋಡಿಯಾ ದೇಶದಲ್ಲಿ ಕೆಲಸಕ್ಕೆ ತೆರಳಿದ ಬಾಳೆಹೊನ್ನೂರು ಯುವಕ ಮಾಲೀಕರ ಬಳಿ ಬಂಧಿ
ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ವಿದೇಶಕ್ಕೆ ಕೆಲಸಕ್ಕೆ ಹೋದ ಯುವಕನೊಬ್ಬ ಬ್ರೋಕರ್‌ಗಳಿಂದ ಮೋಸ ಹೋಗಿ ಮಾಲೀಕರ ಬಳಿ ಸಿಲುಕಿಕೊಂಡು ಸ್ವದೇಶಕ್ಕೆ ವಾಪಾಸ್ ಬರಲಾಗದೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಬಾಳೆಹೊನ್ನೂರು ಸಮೀಪದ ಮಾಗುಂಡಿ – ಮಹಲ್ಗೋಡು ಗ್ರಾಮದ ಸುರೇಶ್, ಪ್ರೇಮಾ ದಂಪತಿಗಳ ಮೊದಲ ಪುತ್ರ ಅಶೋಕ್ (26) ವಿದೇಶದಲ್ಲಿ ಸಿಲುಕಿಕೊಂಡ ಯುವಕನಾಗಿದ್ದಾನೆ. ಈತನಿಗೆ ಡಾಟಾ ಎಂಟ್ರಿ ಆಪರೇಟರ್ ಕೆಲಸ ಕೊಡಿಸುವುದಾಗಿ ಎನ್.ಆರ್. ಪುರ ಮೂಲದ ಭರತ್ ಮತ್ತು ನಿಕ್ಷೇಪ್ ಎಂಬುವವರು ನಂಬಿಸಿ ಕಾಂಬೋಡಿಯಾಕ್ಕೆ ಕರೆದುಕೊಂಡು ಹೋಗಿದ್ದಾರೆ. ಕೆಲಸಕ್ಕೆ ಸೇರ್ಪಡೆಗೊಂಡ ಬಳಿಕ ಯುವಕ ಅಶೋಕ್‌ಗೆ ಇದು ವಂಚನೆ ಮಾಡುವ ಜಾಲವಾಗಿದ್ದು, ಇಲ್ಲಿಂದ ವಿವಿಧ ಜನರ ಮೊಬೈಲ್‌ಗೆ ಕರೆ, ಮೆಸೇಜ್ ಮಾಡಿ ಹಣ ಲಪಟಾಯಿಸುವ ದಂಧೆ ಎಂದು ತಿಳಿದಿದೆ. ಆದರೆ ಯುವಕ ಅಶೋಕ್ ನಾನು ಈ ಕೆಲಸವನ್ನು ಮಾಡುವುದಿಲ್ಲ. ವಾಪಾಸ್ ಭಾರತಕ್ಕೆ ತೆರಳುತ್ತೇನೆ ಎಂದಾಗ ಅದರ ಮಾಲೀಕ ಯುವಕನಿಗೆ ವಿಚಿತ್ರ ಶಿಕ್ಷೆ ನೀಡಿ ಬೆದರಿಸುತ್ತಾ ಆತನಿಂದ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಂಡಿದ್ದಾನೆ.
ಡಾಟಾ ಎಂಟ್ರಿ ಆಪರೇಟರ್ ಕೆಲಸ, ಹೆಚ್ಚು ಹಣದ ಆಸೆ ತೋರಿಸಿ ನನ್ನ ಮಗನನ್ನು ಭರತ್, ನಿಕ್ಷೇಪ್ ಕರೆದೊಯ್ದು ಕಾಂಬೋಡಿಯದಲ್ಲಿ ಬೇರೆಯವರಿಂದ ಹಣ ಪಡೆದು ನನ್ನ ಮಗನನ್ನು ವಂಚಕರಿಗೆ ಮಾರಾಟ ಮಾಡಿದ್ದಾರೆ. ಕೂಡಲೇ ಈ ಇಬ್ಬರ ಕುಟುಂಬಸ್ಥರನ್ನು ವಿಚಾರಣೆ ನಡೆಸಿದಲ್ಲಿ ನನ್ನ ಮಗನನ್ನು ವಾಪಾಸ್ ಕರೆತರಲು ಸಾಧ್ಯವಿದೆ. ಇಲ್ಲದಿದ್ದರೆ ಅವನ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಸರ್ಕಾರ ನನ್ನ ಮಗನನ್ನು ರಕ್ಷಣೆ ಮಾಡಿಕೊಡಬೇಕು – ಸುರೇಶ್, ಯುವಕ ಅಶೋಕ್ ತಂದೆ.
ಕಳೆದ ಒಂದು ವಾರದಿಂದ ಯುವಕನನ್ನು ಬಲವಂತವಾಗಿ ಕೊಠಡಿಯೊಂದರಲ್ಲಿ ಕೂಡಿ ಹಾಕಿ, ನೀನು ಕೆಲಸ ಬಿಟ್ಟು ವಾಪಾಸ್ ಊರಿಗೆ ತೆರಳಬೇಕಾದರೆ ರೂ. 3 ಲಕ್ಷ ಹಣ ನೀಡಬೇಕು. ಇಲ್ಲದಿದ್ದಲ್ಲಿ ನಿನ್ನನ್ನು ಎರಡು ದಿನದಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅದಲ್ಲದೇ ಯುವಕನಿಂದ ಕುಟುಂಬಸ್ಥರಿಗೆ ಕರೆ ಮಾಡಿಸಿ ಹಣ ಕಳುಹಿಸಲು ಹೇಳುವಂತೆ ಒತ್ತಾಯಿಸಿದ್ದಾರೆ.
ಶನಿವಾರ ಯುವಕನ ಪೋಷಕರು ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಬಾಳೆಹೊನ್ನೂರು ಠಾಣೆಗೆ ಮನವಿ ಸಲ್ಲಿಸಿ ಅಶೋಕ್‌ನನ್ನು ಕಾಂಬೋಡಿಯಾಕ್ಕೆ ಕರೆದುಕೊಂಡು ಹೋದ ನಿಕ್ಷೇಪ್, ಭರತ್ ಪೋಷಕರನ್ನು ಠಾಣೆಗೆ ಕರೆಯಿಸಿ ಅವರನ್ನು ವಿಚಾರಣೆ ಮಾಡಿ ಅಶೋಕ್‌ನನ್ನು ವಾಪಾಸ್ ಕರೆಯಿಸುವ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಒಟ್ಟಾರೆಯಾಗಿ ಕೆಲಸ ಆಸೆಗಾಗಿ ತೆರಳಿದ ಗ್ರಾಮೀಣ ಯುವಕ ವಂಚನೆ ಜಾಲಕ್ಕೆ ಬಲಿಯಾಗಿ ತೊಂದರೆಗೆ ಸಿಲುಕಿದ್ದಾನೆ.













