ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ನಿಶ್ಚಿತಾರ್ಥವಾಗಿದ್ದ ಯುವತಿಗೆ ಹುಟ್ಟುಹಬ್ಬದ ಶುಭಾಶಯ ಕಳುಹಿಸಿದ್ದ ಕಾರಣಕ್ಕೆ ಆಕೆಯ ಸಹೋದರ ಸೇರಿದಂತೆ ಕೆಲವರು ಸೇರಿಕೊಂಡು ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬುಧವಾರ ಸಂಜೆ ವರದಿಯಾಗಿದೆ.
ತಾಲ್ಲೂಕಿನ ಉಡೇವಾ ಗ್ರಾಮದ ಮಂಜುನಾಥ್ (21) ಎಂಬ ಯುವಕನನ್ನು ಪಟ್ಟಣದ 206 ಬೈಪಾಸ್ ರಸ್ತೆಯ ಸಮೀಪದ ಅತ್ತಿನಾಳು ಗ್ರಾಮದ ಅಂಡರ್ಪಾಸ್ ಬಳಿ ಸಂಜೆ ಸುಮಾರು 7.45ರ ವೇಳೆಗೆ ಚಾಕುವಿನಿಂದ ಇರಿಯಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮೃತ ಮಂಜುನಾಥ್ ಅವರ ಸಂಬಂಧಿ ಉಡೇವಾ ಗ್ರಾಮದ ಕೋಟೇಶ್ ಎಂ. ಅವರು ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಕಿರಣ್ ಹಾಗೂ ಮನು @ ಮನೋಜ್ ಎಂಬವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಜಿತೇಂದ್ರ ಕುಮಾರ್ ದಯಾಮ, ಎಎಸ್ಪಿ ಸಿ.ಟಿ. ಜಯಕುಮಾರ್ ಹಾಗೂ ಡಿವೈಎಸ್ಪಿ ಪರಶುರಾಮಪ್ಪ ಅವರ ಮಾರ್ಗದರ್ಶನದಲ್ಲಿ ತರೀಕೆರೆ ಪೊಲೀಸ್ ಠಾಣೆಯ ಪಿಐ ರಾಮಚಂದ್ರ ನಾಯಕ, ಪಿಎಸ್ಐ ನಾಗೇಂದ್ರ ನಾಯ್ಕ, ಆನಂದ್ ಪಾವಸ್ಕರ್, ಮಂಜುನಾಥ ಮನ್ನಂಗಿ, ದೇವೇಂದ್ರ ರಾಥೋಡ್, ಎಎಸ್ಐ ರವಿ ಸೇರಿದಂತೆ ಪೊಲೀಸ್ ಸಿಬ್ಬಂದಿ ರುದ್ರೇಶ್, ಮಧು, ಧನಂಜಯ ಸ್ವಾಮಿ, ಹೆಡ್ಕಾನ್ಸ್ಟೇಬಲ್ಗಳಾದ ಪ್ರದೀಪ್, ರಫೀಕ್, ವೇಣುಗೋಪಾಲ್ ಹಾಗೂ ಕಾನ್ಸ್ಟೇಬಲ್ಗಳಾದ ರಿಯಾಜ್, ಕಿರಣ್ ಕುಮಾರ್, ರಾಜೇಶ, ಮೋಹನ್, ಶಿವಕುಮಾರ್, ಎಎಚ್ಸಿ ಶ್ರೀನಿವಾಸ ಮತ್ತು ಜಿಲ್ಲಾ ಕಚೇರಿಯ ತಾಂತ್ರಿಕ ಸಿಬ್ಬಂದಿ ರಬ್ಬಾನಿ ಅವರ ಸಹಕಾರದೊಂದಿಗೆ ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.












