ಕಡೂರು: (ನ್ಯೂಸ್ ಮಲ್ನಾಡ್ ವರದಿ) ರೈಲು ನಿಲ್ದಾಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 2 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಟಾಟಾನಗರದಿಂದ ಯಶವಂತಪುರಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿ ಶನಿವಾರ ದಾಳಿ ನಡೆಸಿದ ವೇಳೆ ಗಾಂಜಾ ಪತ್ತೆಯಾಗಿದೆ. ಆದರೆ, ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯು ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಿದ್ದು, ಆತನ ಪತ್ತೆಗೆ ತನಿಖೆ ಮುಂದುವರಿದಿದೆ.

ದಾಳಿಯಲ್ಲಿ ಆರ್‌ಪಿಎಫ್ ಮೈಸೂರು ವಿಭಾಗದ ಆನಂದ್, ಸಿಬ್ಬಂದಿಗಳಾದ ಮಂಜುಳಾ, ಕುಮಾರ್, ಕಿರಣ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಭಾಗವಹಿಸಿದ್ದರು.

ಇದೇ ವೇಳೆ ಪಟ್ಟಣದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ವೀರಭದ್ರೇಶ್ವರ ದೇವಾಲಯದ ಸಮೀಪ ಗಾಂಜಾ ಸೇವಿಸುತ್ತಿದ್ದ ಧನುಷ್ ಎಂಬ ಯುವಕನನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದರು. ಬಳಿಕ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಈ ಸಂಬಂಧ ಧನುಷ್ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಕಡೂರು ಅಬಕಾರಿ ನಿರೀಕ್ಷಕ ಎಲ್.ಸಿ. ಸಂದೀಪ್, ಅಬಕಾರಿ ಉಪನಿರೀಕ್ಷಕ ಮಡಿವಾಳಪ್ಪ, ಎರಪ್ಪ ಹಾಗೂ ಮುಖ್ಯ ಸಿಬ್ಬಂದಿ ಮಂಜುಳಾ ಭಾಗವಹಿಸಿದ್ದರು.













