
ಕನ್ನಡ ಭಾಷೆ, ನಾಡು-ನುಡಿ ಮತ್ತು ಸಂಸ್ಕೃತಿಯ ಉಳಿವಿಗಾಗಿ ಪ್ರತಿವರ್ಷ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಆಟೋ ಚಾಲಕರ ಸಂಘಕ್ಕೆ ವಾರ್ಷಿಕ ₹5 ಲಕ್ಷ ಅನುದಾನ ಮಂಜೂರು ಮಾಡುವಂತೆ ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.


ಆಟೋ ಚಾಲಕರು ತಮ್ಮ ದುಡಿಮೆಯ ಹಣದಲ್ಲಿ ಪ್ರತಿವರ್ಷ ಕನ್ನಡ ಉತ್ಸವಗಳನ್ನು ಆಯೋಜಿಸಿ ಸ್ಥಳೀಯ ಕಲಾವಿದರು, ಜಾನಪದ ಕಲಾತಂಡಗಳು ಹಾಗೂ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇಂತಹ ಕನ್ನಡಪರ ಕಾರ್ಯಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದುವರೆಗೆ ಆರ್ಥಿಕ ನೆರವು ನೀಡದಿರುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.
ಸಂಘಕ್ಕೆ ವಾರ್ಷಿಕ ವಿಶೇಷ ಅನುದಾನ ನೀಡುವುದರ ಜೊತೆಗೆ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಶ್ರಮಿಸುವ ಆಟೋ ಚಾಲಕರ ಸಂಘಟನೆಗಳಿಗೆ ಅನುದಾನ ನೀಡಲು ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಸುಧಾಕರ್ ಎಸ್. ಶೆಟ್ಟಿ ಒತ್ತಾಯಿಸಿದ್ದಾರೆ.















