

ಚಿಕ್ಕಮಗಳೂರು: ತಾಲ್ಲೂಕಿನ ಖಾಂಡ್ಯ ಹೋಬಳಿ ವ್ಯಾಪ್ತಿಯ ಬಿದರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಬಿದರೆ, ಬ್ಯಾಡಿಗೆರೆ, ಗಂಡಿ, ಚಂದ್ರವಳ್ಳಿ, ಗುಂಡಿಹೊಂಬಳ, ಬಾಳೆಕೊಪ್ಪ, ಪಟ್ನ, ಕರಡಿಖಾನ್, ಉಜಿನಿ, ಹೊಸಪೇಟೆ, ಶಿರಗೋಳ ಸೇರಿದಂತೆ 250ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿದರೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಸುರೇಶ್ ಪಟ್ನ, ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗ್ರಾಮಸ್ಥ ರೋಹಿತ್ ಮಾತನಾಡಿ, ವರದಿ ಅನುಷ್ಠಾನಕ್ಕೆ ಬಂದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಇಲಾಖೆ ತಡೆಯೊಡ್ಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮದ ವರ್ತಕ ಮಹೇಶ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಗ್ರಾಮಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೂ ಇಲಾಖೆ ಅಧಿಕಾರಿಗಳ ಅನುಮತಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿದರು.
ಗ್ರಾಮಸ್ಥ ರಘುಪತಿ ವಿ.ಸಿ. ಮಾತನಾಡಿ, ವರದಿ ಅನುಷ್ಠಾನಕ್ಕೆ ಬಂದರೆ ಸಾಮಾನ್ಯ ಜನರು ಹಲವು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದ ಯೋಜನೆಗಳು ಬಂದರೂ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅವುಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಉದಯ್ ಪಟ್ನ ಮಾತನಾಡಿ, ನಾವು ಸುಮ್ಮನೆ ಕುಳಿತರೆ ಖಾಂಡ್ಯದಲ್ಲಿ ಚೆಕ್‌ಪೋಸ್ಟ್ ನಿರ್ಮಾಣವಾಗಿ, ಗ್ರಾಮಕ್ಕೆ ತೆರಳಲು ಸಹ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದರು.
ಶಂಕ್ರೇಗೌಡ ಉಜಿನಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಸ್ತೂರಿ ರಂಗನ್ ವರದಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ನಂತರ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮನವಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಬ್ರೇಜ್ ಅಹಮದ್ ಅವರ ಮೂಲಕ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿದರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್ ಪಟ್ನ, ಸುರೇಶ್ ಬಿದರೆ, ಮಾಜಿ ಉಪಾಧ್ಯಕ್ಷರಾದ ಯಶೋಧ ಬಿದರೆ, ಪೂರ್ಣೇಶ್ ಉಜಿನಿ, ಗ್ರಾಮಸ್ಥರಾದ ಶಶಿಗೌಡ, ವಿನಯ್ ಉಜಿನಿ, ಜೋಯ್, ಯೋಗೇಶ್, ರಾಜು ಗುಂಡಿಹೊಂಬಳ, ಸಚಿನ್ ಬಿದರೆ, ದೇವೇಂದ್ರ ಬಿದರೆ, ಹರೀಶ್ ಬ್ಯಾಡಿಗೆರೆ, ಸಂದರ್ಶನ ಪ್ರಿಯತ್, ಅಭಿಷೇಕ್, ಪ್ರದೀಪ್ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ದೇವೇಂದ್ರ ಗೌಡ, ಬಿದರೆ













