

ಬಾಳೆಹೊನ್ನೂರು:(ನ್ಯೂಸ್ ಮಲ್ನಾಡ್ ವರದಿ) ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ವಿಚಾರದಲ್ಲಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರ ನಡೆ ಖಂಡನೀಯವಾಗಿದೆ ಎಂದು ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಅರಗಿ ಆರೋಪಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ವಿರುದ್ಧ ಮಲೆನಾಡು ಸೇರಿದಂತೆ ನಮ್ಮ ತಾಲೂಕು, ಕ್ಷೇತ್ರ, ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹೋರಾಟ ತೀವ್ರಗೊಂಡಿದೆ. ಈ ಹೋರಾಟದಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ರೈತರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ ರೈತರು ಹಾಗೂ ಜನಸಾಮಾನ್ಯರು ಸ್ವತಂತ್ರವಾಗಿ ಬದುಕಲು ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರು ಈ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

ಕ್ಷೇತ್ರದ ಜನರ ಮತದಿಂದ ಮೂರು ಬಾರಿ ಶಾಸಕರಾಗಿ, ಸಚಿವರಾಗಿ, ಮುಖ್ಯ ಸಚೇತಕರಾಗಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ಅನುಭವಿಸಿರುವ ಜೀವರಾಜ್ ಅವರು, ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಆದರೆ ಈ ವಿಚಾರದಲ್ಲಿ ಮೌನ ವಹಿಸಿರುವುದು ಕ್ಷೇತ್ರದ ಜನರಿಗೆ ಮಾಡಿದ ಅಪಮಾನವಾಗಿದೆ ಎಂದು ರತನ್ ಗೌಡ ಅರಗಿ ಹೇಳಿದ್ದಾರೆ.
ತಮ್ಮ ವೈಯಕ್ತಿಕ ಕೆಲಸಗಳು ಹಾಗೂ ಪ್ರತಿಷ್ಠೆಯ ವಿಚಾರದಲ್ಲಿ ಕೇಂದ್ರ ಸಚಿವರು ಸೇರಿದಂತೆ ತಮಗೆ ಅಗತ್ಯವಿರುವವರನ್ನು ಭೇಟಿ ಮಾಡುವ ಮಾಜಿ ಶಾಸಕರು, ರೈತರ ಬದುಕಿನ ಮೇಲೆ ಪರಿಣಾಮ ಬೀರುವ ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುವ ಕೆಲಸ ಮಾಡುತ್ತಿಲ್ಲ. ಅಲ್ಲದೆ, ವರದಿಯನ್ನು ವಿರೋಧಿಸುವಂತೆ ತಮ್ಮ ಪಕ್ಷದ ಸಂಸದರು ಹಾಗೂ ಸಚಿವರಿಗೆ ಮನವರಿಕೆ ಮಾಡುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
“ನಿಮ್ಮನ್ನು ಗೆಲ್ಲಿಸಿ ಅಧಿಕಾರಕ್ಕೆ ತರಲು ಮಾತ್ರ ಜನಸಾಮಾನ್ಯರು ಬೇಕೇ?” ಎಂದು ಪ್ರಶ್ನಿಸಿರುವ ರತನ್ ಗೌಡ ಅರಗಿ, ರೈತರ ಸಮಸ್ಯೆಗಳ ಸಂದರ್ಭದಲ್ಲಿ ಜನರೊಂದಿಗೆ ನಿಲ್ಲುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಕಳೆದ ಹಲವು ದಿನಗಳಿಂದ ಬಾಳೆಹೊನ್ನೂರು ಬಂದ್ ಹಾಗೂ ಪ್ರತಿಭಟನೆಯ ಕುರಿತು ಎಲ್ಲರಿಗೂ ಮಾಹಿತಿ ನೀಡಲಾಗಿತ್ತು. ಆದರೂ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರು ಭಾಗವಹಿಸದೆ ಇರುವುದು ಅವರ ರೈತಪರ ಕಾಳಜಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.
“ಒಬ್ಬ ರೈತನಾಗಿ ಅವರ ಈ ನಡೆಯನ್ನು ನಾನು ಖಂಡಿಸುತ್ತೇನೆ. ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಇಂತಹ ನಡೆ ಮುಂದಿನ ದಿನಗಳಲ್ಲಿ ಅವರಿಗೆ ಪಶ್ಚಾತ್ತಾಪ ತರುವ ಪರಿಸ್ಥಿತಿ ನಿರ್ಮಿಸಬಹುದು” ಎಂದು ರತನ್ ಗೌಡ ಅರಗಿ ತಿಳಿಸಿದ್ದಾರೆ.













