ಕಳಸ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಗಾಳಿಗಂಡಿಯ ಹಾರ್ಮಕ್ಕಿ ಎಸ್ಟೇಟಿನಲ್ಲಿ ಬಳ್ಳಾರಿ ಜಿಲ್ಲೆಯ ಮೂವರು ಕಾರ್ಮಿಕರ ನಡುವೆ ಉಂಟಾದ ಜಗಳವು ಒಬ್ಬರ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಮೂಲದ ಬಸವರಾಜಪ್ಪ (45), ಭೀಮಪ್ಪ (32) ಹಾಗೂ ಫಕೀರಪ್ಪ (40) ಎಂಬ ಮೂವರು ಕಾರ್ಮಿಕರು ಐದು ದಿನಗಳ ಹಿಂದೆ ಹಾರ್ಮಕ್ಕಿ ಎಸ್ಟೇಟಿಗೆ ಕಳೆ ಹೊಡೆಯುವ ಯಂತ್ರ ಚಲಾಯಿಸುವ ಕೆಲಸಕ್ಕಾಗಿ ಬಂದಿದ್ದರು.

ಸೋಮವಾರ ರಾತ್ರಿ ಸಂಬಂಧಿಕರಾದ ಬಸವರಾಜಪ್ಪ ಮತ್ತು ಭೀಮಪ್ಪ ನಡುವೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಜಗಳಕ್ಕೆ ತಿರುಗಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಫಕೀರಪ್ಪನೊಂದಿಗೆ ಕೂಡ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಜಗಳದ ವೇಳೆ ಪರಸ್ಪರ ಬ್ಲೇಡ್ ಹಾಗೂ ಕತ್ತಿ ಬಳಸಿ ಹಲ್ಲೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಭೀಮಪ್ಪನ ತಲೆಯ ಹಿಂಭಾಗಕ್ಕೆ ಕತ್ತಿಯ ಏಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದರು.

ಮೂವರು ಪಾನಮತ್ತರಾಗಿದ್ದರು ಎಂಬ ಶಂಕೆ ವ್ಯಕ್ತವಾಗಿದ್ದು, ಗಾಯಗೊಂಡ ಭೀಮಪ್ಪ ನಶೆಯಲ್ಲೇ ಅಲ್ಲೇ ಮಲಗಿದ್ದರಿಂದ ತಲೆಯಿಂದ ಹೆಚ್ಚಿನ ರಕ್ತಸ್ರಾವವಾಗಿ ಬೆಳಿಗ್ಗೆ ವೇಳೆಗೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಬಸವರಾಜಪ್ಪ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಬ್ಬ ಆರೋಪಿ ಫಕೀರಪ್ಪನನ್ನು ಕಳಸ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್, ಇನ್‌ಸ್ಪೆಕ್ಟರ್ ರಾಜಶೇಖರ್ ಹಾಗೂ ಕಳಸ ಠಾಣಾಧಿಕಾರಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.













