ಬಣಕಲ್: (ನ್ಯೂಸ್ ಮಲ್ನಾಡ್ ವರದಿ) ವೃದ್ಧಾಪ್ಯ ವೇತನ, ವಿಧವಾ ವೇತನ ಸೌಲಭ್ಯಗಳು ಗ್ರಾಮದ ಹಿರಿಯರಿಗೆ ತಲುಪದಿದ್ದಲ್ಲಿ ಅಥವಾ ನೋಂದಣಿ ಮಾಡಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಹಿರಿಯರಿಗೆ ಸಾಮಾಜಿಕ ಭದ್ರತೆ ದೊರೆಯುವಂತಾಗಬೇಕು ಎಂದು ಬಣಕಲ್ ಹೋಬಳಿ ಗ್ರಾಮ ಲೆಕ್ಕಾಧಿಕಾರಿ ಬಿ.ಪಂಪನಾ ಹೇಳಿದರು.
ಇದನ್ನೂ ಓದಿ; ನಿಮಗೆ ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲವಾ?; ನಿಮ್ಮ ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬಣಕಲ್ ಹಾಗೂ ತರುವೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಿಂಚಣಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಹಿರಿಯರಿಗೆ ಸಿಗುವಂತಹ ಸೌಲಭ್ಯಗಳು ಸಕಾಲದಲ್ಲಿ ಸಿಗುವಂತಾಗಬೇಕು.ಹಾಗೂ ಸೌಲಭ್ಯ ವಂಚಿತರಾಗಿ ಹಿರಿಯರು ಕೊರಗಬಾರದು ಎಂಬ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿರಿಯರಿಗೆ ಪಿಂಚಣಿ ಬರುತ್ತಿದ್ದು ಕೆಲವು ಸಮಯದಿಂದ ನಿಂತು ಹೋಗಿದ್ದರೆ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಅಥವಾ ಆಯಾ ಗ್ರಾ.ಪಂಗಳಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಹತೆಯಿದ್ದು ಪಿಂಚಣಿ ಪಡೆಯದವರು ಕೂಡ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ತರುವೆ ಗ್ರಾ.ಪಂ ಅಧ್ಯಕ್ಷ ಬಿ.ಎಂ.ಸತೀಶ್ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಂದಾಯ ಇಲಾಖೆಯಿಂದ ಪಿಂಚಣಿ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಇನ್ನು ತರುವೆ ಹಾಗೂ ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಪಿಂಚಣಿದಾರರ ಸಮಸ್ಯೆ ಹಾಗೂ ಕುಂದು ಕೊರತೆಗಳನ್ನು ಚರ್ಚಿಸಿ ಅಹವಾಲುಗಳನ್ನು ಸ್ವೀಕರಿಸಲಾಯಿತು. ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಯಿತು. ಹೊಸದಾಗಿ ಪಿಂಚಣಿಗೆ ಅರ್ಜಿ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಇಂದುಶೇಖರ್, ಗ್ರಾಮ ಲೆಕ್ಕಾಧಿಕಾರಿ ಬಿ.ಪಂಪನಾ, ರಮ್ಯ, ಹನಿಷ, ತರುವೆ ಪ್ರಭಾರಿ ಪಿಡಿಒ ಮಹೇಶ್, ಉಪಾಧ್ಯಕ್ಷೆ ಸ್ಮಿತಾ ಸದಸ್ಯರಾದ ಎ.ಎನ್.ರಘು, ಸ್ವರೂಪ ಪ್ರಶಾಂತ್, ಸುಶೀಲ, ಬಣಕಲ್ ಪಿಡಿಒ ಬಿ.ಎನ್.ಕೃಷ್ಣಪ್ಪ, ಹಾಗೂ ಗ್ರಾ.ಪಂ ಸದಸ್ಯರುಗಳು ಇದ್ದರು.
ವರದಿ- ತನು ಕೊಟ್ಟಿಗೆಹಾರ
ಚಾರ್ಮಾಡಿ ಘಾಟ್ ತಿರುವುಗಳಿಗೆ ಬ್ರೇಕ್; ಅಭಿವೃದ್ಧಿ ಯೋಜನೆಗೆ ಕೇಂದ್ರದ ಹಸಿರು ನಿಶಾನೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟಿ ರಸ್ತೆಯ ಚಾರ್ಮಾಡಿ ಹಳ್ಳದಿಂದ ಘಾಟಿಯ 11ನೇ ತಿರುವು ವರೆಗಿನ 11.2 ಕಿ.ಮೀ ಅಭಿವೃದ್ಧಿಯ 490 ಕೋಟಿ ವೆಚ್ಚದ ಕಾಮಗಾರಿಗೆ ಸಂಬಂಧಿಸಿದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ.
ಈ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯ ಮೊದಲ ಹಂತ ಬಂಟ್ವಾಳದ ಬಿ.ಸಿ ರೋಡ್ ನಿಂದ ಪುಂಜಾಲಕಟ್ಟೆವರೆಗೆ ಪೂರ್ಣಗೊಂಡಿದ್ದು ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ಕಾಮಗಾರಿ ಪ್ರಗತಿಯಲ್ಲಿದೆ. ಚಾರ್ಮಾಡಿ ಘಾಟಿಯಲ್ಲಿ ಮೂರನೇ ಹಂತದ ಈ ಕಾಮಗಾರಿಯ ಡಿಪಿಆರ್ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಚಾರ್ಮಾಡಿ ಘಾಟಿ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 25 ಕಿ.ಮೀ ವ್ಯಾಪ್ತಿ ಹೊಂದಿದೆ. ಈ ಪೈಕಿ ದಕ್ಷಿಣ ಕನ್ನಡ ಭಾಗದ 11.20 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಲಿದೆ. ರಸ್ತೆ 10 ಮೀಟರ್ ಅಗಲವಾಗಲಿದೆ. 7,745 ಕೋಟಿ ವೆಚ್ಚದಲ್ಲಿ ದೇಶದ ಒಟ್ಟು 588 ಕಿ.ಮೀ ರಸ್ತೆಯ 21 ಯೋಜನೆಗಳ ಪ್ರಸ್ತಾವಕ್ಕೆ ಅನುಮೋದನೆ ಲಭಿಸಿದೆ. ಈ ಯೋಜನೆಗಳಲ್ಲಿ ಚಾರ್ಮಾಡಿ ಘಾಟಿಯ ಅಭಿವೃದ್ಧಿಯೂ ಸೇರಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮೌಲಿಕ್ ಎ ತಿಳಿಸಿದರು.
ರಸ್ತೆ ಅಭಿವೃದ್ಧಿಯಿಂದ ಪ್ರಯಾಣಿಕರಿಗೆ ಅನುಕೂಲ:
ಸೌ೦ದರ್ಯದ ಜೊತೆ ಅಪಾಯಕಾರಿಯೂ ಆಗಿರುವ ಚಾರ್ಮಾಡಿ ಘಾಟಿ ಪರಿಸರದಲ್ಲಿ ಸಾಕಷ್ಟು ಗುಡ್ಡಗಳು, ಬಂಡೆಕಲ್ಲು, ಮರಗಳು ಇದ್ದು, ಇವೆಲ್ಲ ರಸ್ತೆಗೆ ಉರುಳಿ ಬೀಳುವುದು ಮಳೆಗಾಲದಲ್ಲಿ ಸಾಮಾನ್ಯವಾಗಿದೆ. ವಾಹನ ದಟ್ಟಣೆಯೂ ಅಧಿಕವಿರುವ ಕಾರಣ ಘಾಟ್ ಪರಿಸರದ ರಸ್ತೆ ಅಗಲೀಕರಣ ಅಗತ್ಯವಾಗಿತ್ತು. ರಸ್ತೆ ಅಭಿವೃದ್ಧಿಯಿಂದ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.












