ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಅಮ್ಮ ಫೌಂಡೇಶನ್‌ನ ಪ್ರಧಾನ ಸಂಚಾಲಕರಾಗಿ ಹಿರಿಯ ಸಮಾಜಸೇವಕ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ 2006–2007ನೇ ಸಾಲಿನ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಪಿ.ಜೆ. ಅಂಟೋನಿ ಅವರು ಅಧಿಕಾರ ಸ್ವೀಕರಿಸಿದರು.
ಸಮಾಜಸೇವೆ ಮತ್ತು ಸಾರ್ವಜನಿಕ ಜೀವನದಲ್ಲಿ ಹಲವು ದಶಕಗಳಿಂದ ಸಲ್ಲಿಸಿರುವ ಸೇವೆ, ಆಡಳಿತಾತ್ಮಕ ಅನುಭವ ಹಾಗೂ ಸಮಾಜಮುಖಿ ಚಿಂತನೆಗಳನ್ನು ಪರಿಗಣಿಸಿ ಅಮ್ಮ ಫೌಂಡೇಶನ್ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಅವರು ಅಂಟೋನಿ ಅವರನ್ನು ಪ್ರಧಾನ ಸಂಚಾಲಕರಾಗಿ ಕಾರ್ಯನಿರ್ವಹಿಸಲು ಆಹ್ವಾನಿಸಿದ್ದರು.

ಈ ಮನವಿಯನ್ನು ಸ್ವೀಕರಿಸಿದ ಪಿ.ಜೆ. ಅಂಟೋನಿ ಅವರು ಅಮ್ಮ ಫೌಂಡೇಶನ್ ಪೂರ್ಣಾವಧಿ ಕಾರ್ಯಕರ್ತರ ಸಮ್ಮೇಳನದಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಡಾ. ವೆಂಕಪ್ಪ ಆಚಾರ್, ಕಾರ್ಯನಿರ್ವಾಹಕ ಅಧಿಕಾರಿಗಳಾದ ಗುರುಪ್ರಸಾದ್ ಹಾಗೂ ಮಲ್ಲೇಶ್ ಹೆಗಡೆ, ಕ್ಷೇತ್ರ ಮತ್ತು ಹೋಬಳಿ ಸಂಚಾಲಕರಾದ ಚಂದ್ರಶೇಖರ್, ಸುಧಾ ಪೈ ಮತ್ತು ಮಂಜುಳ ಸಂದೇಶ್ ಉಪಸ್ಥಿತರಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಪಿ.ಜೆ. ಅಂಟೋನಿ ಅವರು, ಸಮಾಜಸೇವೆಯೇ ತಮ್ಮ ಜೀವನದ ಧ್ಯೇಯವಾಗಿದ್ದು, ಅಮ್ಮ ಫೌಂಡೇಶನ್‌ನ ಉದ್ದೇಶಗಳನ್ನು ಸಂಪೂರ್ಣ ಸಮರ್ಪಣೆಯಿಂದ ಸಾಕಾರಗೊಳಿಸಲು ಕಾರ್ಯನಿರ್ವಹಿಸುವುದಾಗಿ ಹೇಳಿದರು. ಯಾವುದೇ ವೈಯಕ್ತಿಕ ನಿರೀಕ್ಷೆಯಿಲ್ಲದೆ ಸಮಾಜದ ಒಳಿತಿಗಾಗಿ ತಮ್ಮ ಅನುಭವ ಮತ್ತು ಸಮಯವನ್ನು ಮೀಸಲಿಡುವುದಾಗಿ ತಿಳಿಸಿದರು.
ಅಮ್ಮ ಫೌಂಡೇಶನ್ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ಉದ್ಯೋಗ ಹಾಗೂ ಬಡವರ ಕಲ್ಯಾಣಕ್ಕಾಗಿ ಕೈಗೊಂಡಿರುವ ಕಾರ್ಯಗಳು ತಮ್ಮನ್ನು ಪ್ರೇರೇಪಿಸಿವೆ ಎಂದು ಅವರು ಅಭಿಪ್ರಾಯಪಟ್ಟರು.
ಅಮ್ಮ ಫೌಂಡೇಶನ್ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಿಸುವ ಸಂಕಲ್ಪದೊಂದಿಗೆ ರಾಜಕೀಯಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದು, ಪಿ.ಜೆ. ಅಂಟೋನಿ ಅವರ ಅನುಭವ ಮತ್ತು ಜನಸೇವೆಯ ಬದ್ಧತೆ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಹೊಸ ಶಕ್ತಿ ತುಂಬಲಿದೆ ಎಂದು ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.













