ನಾಡಿಗೆ ಬೆಳಕು ನೀಡುತ್ತಿರುವ ಶರಾವತಿ ನದಿಯಿಂದ ಇನ್ನಷ್ಟು ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ರಾಜ್ಯ ಸರ್ಕಾರ, ಶರಾವತಿ ನದಿ ನೀರನ್ನು ಅಂತರ್ಗತವಾಗಿ ಮೇಲಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ನೀರನ್ನು ಪುನಃ ಕೆಳಗೆ ಕಳುಹಿಸಿ ಜಲ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ ಮುಂದಾಗಿದೆ. ಇದಕ್ಕಾಗಿ ಸರ್ಕಾರ ಇತ್ತೀಚಿನ ಬಜೆಟ್ನಲ್ಲಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಆದರೆ ಯೋಜನೆಗೆ ಪರಿಸರಪ್ರೇಮಿಗಳು, ಸಾರ್ವಜನಿಕರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಶರಾವತಿ ನದಿಗೆ ಸಾಗರ ತಾಲೂಕು ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ಹಾಲಿ ನಾಲ್ಕು ವಿದ್ಯುದಾಗಾರದಿಂದ 1,469.20 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ರಾಜ್ಯ ಸರ್ಕಾರ ತನ್ನ ಕೆಪಿಟಿಸಿಎಲ್ ಇಲಾಖೆಯ ಮೂಲಕ ಶರಾವತಿ ಅಂತರ್ಗತ ಜಲ ವಿದ್ಯುತ್ ಯೋಜನೆ ಜಾರಿ ಮಾಡಲು ಮುಂದಾಗಿದೆ. ಸಾಗರ ತಾಲೂಕಿನ ತಳಕಳಲೆ ಎಂಬಲ್ಲಿ ಸಮತೋಲನ ಅಣೆಕಟ್ಟು ನಿರ್ಮಿಸಲಾಗಿದೆ.

ವಿದ್ಯುತ್ ಉತ್ಪಾದನೆಗಾಗಿ ತಲಕಳಲೆ ಸಂತುಲನ ಅಣೆಕಟ್ಟೆಯ ನೀರನ್ನು ಬಳಸಿಕೊಂಡ ನಂತರದಲ್ಲಿ ನೀರು ಮುಂದಿನ ಗೇರುಸೊಪ್ಪಾ ಅಣೆಕಟ್ಟು ತಲುಪುತ್ತದೆ. ಅಲ್ಲಿಯೂ 240 ಮೆ.ವ್ಯಾ. ವಿದ್ಯುತ್ ಉತ್ಪಾದಿಸಿ, ನಂತರದಲ್ಲಿ ಶರಾವತಿ ನದಿ ಮುಂದೆ ಸಾಗಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಾಗದ ಜನರ ಬದುಕನ್ನು ಪೊರೆಯುತ್ತಾ ಅರಬ್ಬಿ ಸಮುದ್ರ ಸೇರುತ್ತದೆ. ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವ ಕೆಪಿಟಿಸಿಎಲ್ ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆ ಈ ಯೋಜನೆಯನ್ನು ರೂಪಿಸಿದ್ದು, ಗೇರುಸೊಪ್ಪ ಅಣೆಕಟ್ಟಿಯಲ್ಲಿ ಸಂಗ್ರಹವಾಗುವ ನೀರನ್ನು ಮತ್ತೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ತಲಕಳಲೆ ಅಣೆಕಟ್ಟಿಗೆ ಎತ್ತಿ ತರುವುದು. ಹಾಗೆ ಎತ್ತಿ ತಂದ ನೀರಿನಿಂದ ಮತ್ತೆ 2,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವುದು ಯೋಜನೆಯ ಉದ್ದೇಶವಾಗಿದ್ದು, ಈ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: 2,000 ಹಣ ಪಡೆಯಲು ತಪ್ಪದೇ ಈ ಕೆಲಸ ಮಾಡಿ
ಈ ಯೋಜನೆಗೆ ವಿರೋಧ ಏಕೆ?:
2000 ಮೆ.ವ್ಯಾ. ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪರಿಸರ ಪರಿಣಾಮ ಮೌಲ್ಯಮಾಪನವು ಹಲವು ಮೂಲಭೂತ ವಿಶ್ವಾಸಾರ್ಹತೆಯ ತೀರ್ವ ಕೊರತೆಯನ್ನು ಎತ್ತಿ ತೋರುತ್ತಿದೆ. ಪರಿಸರ, ಸಾಮಾಜಿಕ ಮತ್ತು ಸಾಮುಚ್ಛಾಯಿಕ ಪರಿಣಾಮಗಳ ಬಗ್ಗೆ ವಿಮರ್ಶಾತ್ಮಕ ಕೊರತೆಯನ್ನು ಹೊಂದಿದೆ.
ಪರಿಸರದ ಮೇಲಾಗುವ ಹಲವು ಅಂಶಗಳನ್ನು ಸಂಪೂರ್ಣವಾಗಿ ಮರೆ ಮಾಚಲಾಗಿದೆ. ಶರಾವತಿ ಸಿಂಗಳೀಕ ಅಭಯಾರಣ್ಯದ ಮತ್ತು ನಿತ್ಯ ಹರಿದ್ವರಣ ಮಳೆಕಾಡುಗಳ ಕೇಂದ್ರ ಭಾಗದಲ್ಲಿ ರೂಪಿಸಲು ಹೊರಟಿರುವ ಯೋಜನಾ ಪ್ರದೇಶವು ಅಳಿವಿನಂಚಿನಲ್ಲಿರುವ ಅನೇಕ ವನ್ಯಜೀವಿಗಳ ಆವಾಸಸ್ಥಾನವಾಗಿದ್ದು, ಯೋಜನೆ ಜಾರಿ ಅವಕಾಶವು ಹುರುಳಿಲ್ಲದ್ದಾಗಿದೆ.
ಕ್ಷೇತ್ರ ಪರ್ಯಟನೆ ಮತ್ತು ಆಳವಾದ ವೈಜ್ಞಾನಿಕ ರೀತಿಯಲ್ಲಿ ಸಂಶೋಧನೆ ಮಾಡಿ ಪರಿಸರ ಪರಿಣಾಮ ಮೌಲ್ಯಮಾಪನವನ್ನು ಸಿದ್ಧಪಡಿಸುವ ಬದಲು, ನಾಮಕಾವಾಸ್ತೆಯ ರೂಪದಲ್ಲಿ ವಾಸ್ತವಿಕ, ಹಾನಿಕಾರಕ ವಿಷಯಗಳನ್ನು ಮುಚ್ಚಿಟ್ಟು ಯೋಜನೆಗೆ ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಈ ತರಹದ ಸುಳ್ಳು, ಪೊಳ್ಳು ಮತ್ತು ಜೊಳ್ಳು ವರದಿಯ ಕೆಲವು ತಪ್ಪು ಹಾಗೂ ವಾಸ್ತವಿಕವಾಗಿ ಕೈಬಿಟ್ಟ ಅಂಶಗಳನ್ನು ಸಾರ್ವಜನಿಕ ಅಹವಾಲು ಸಭೆಯಲ್ಲಿ ತಕರಾರುಗಳನ್ನು ಸಲ್ಲಿಸಿದ್ದಾರೆ.
1. ಮೂಲಭೂತವಾಗಿ ಇದೊಂದು ಸುಳ್ಳುಗಳನ್ನೊಳಗೊಂಡ ಪರಿಸರ ಪರಿಣಾಮ ಮೌಲ್ಯಮಾಪನವಾಗಿದ್ದು, ಅನೇಕ ಅಪಾಯಗಳಾದ – ವಿಷಪೂರಿತ ಸಾಮಗ್ರಿಗಳ ನಿರ್ವಹಣೆ, ತ್ಯಾಜ್ಯ ವಿಲೇವಾರಿ, ರಾಸಾಯನಿಕಗಳ ಸೋರುವಿಕೆ, ಜೀವಿವೈವಿಧ್ಯ ನಾಶದ ಪ್ರಮಾಣ, ಮರಳು ಗಣಿಗಾರಿಕೆಯ ಪರಿಣಾಮ ಹಾಗೂ ಸಾಮುಚ್ಛಾಯಿಕ ನದಿ ಪಾತ್ರದ ಮೇಲಿನ ಪರಿಣಾಮಗಳನ್ನು ಮುಚ್ಚಿಡಲಾಗಿದೆ.
ಇದನ್ನೂ ಓದಿ: 10th ಪಾಸಾದವರಿಗೆ ಸರ್ಕಾರಿ ಉದ್ಯೋಗ; 21,000 ಸಂಬಳ
2. ಯೋಜನಾ ಹಿನ್ನೆಲೆಯಲ್ಲಿ ರಚಿಸಿದ ನಕಾಶೆಯಲ್ಲಿನ ವೈಫಲ್ಯ:
ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಯೋಜನಾ ಪ್ರದೇಶದ ನಿಖರ ಹಾಗೂ ಸಮಗ್ರ ನಕಾಶೆಯ ಕೊರತೆಯಿದೆ. ಯೋಜನಾ ಪ್ರದೇಶವು ಶರಾವತಿ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶದಲ್ಲಿದೆ ಎಂಬುದನ್ನು ಮರೆಮಾಚಲಾಗಿದೆ. ಶರಾವತಿ ನದಿಯ ಜಲಶಾಸ್ತ್ರದ ಜೊತೆಗೆ ನಿರಂತರವಾಗಿ ಹರಿಯುವ ತೊರೆಗಳು, ನೈಸರ್ಗಿಕ ಅಬ್ಬಿಗಳು, ಕುಡಿಯುವ ನೀರಿನ ಬಾವಿಗಳು, ನೂರಾರು ವರ್ಷಗಳಿಂದ ಇರುವ ನೆರೆ ಪ್ರದೇಶಗಳು ಇತ್ಯಾದಿಗಳ ನಿಖರ ಮಾಹಿತಿಯು ಇರುವುದಿಲ್ಲ. ರಸ್ತೆಗಳು, ಕಾರ್ಮಿಕ ವಸತಿ ಗೃಹಗಳು, ಗುತ್ತಿಗೆದಾರರ ಕಛೇರಿ, ಅಣೆಕಟ್ಟು, ಸುರಂಗ ಮಾರ್ಗ, ವಿದ್ಯುದಾಗಾರ, ಟ್ರಾನ್ಸ್ಫಾರ್ಮರ್ ಸ್ಥಾಪಿಸುವ ಪ್ರದೇಶ, ತ್ಯಾಜ್ಯ ವಿಲೇವಾರಿ ಪ್ರದೇಶ ಹಾಗೂ ಮರಳು-ಜಲ್ಲಿ ಗಣಿಗಾರಿಕೆ ಪ್ರದೇಶಗಳ ಜೊತೆಗೆ ಮನುಷ್ಯರ ಆವಾಸಸ್ಥಾನ, ಹಳ್ಳಿಗಳು, ದೇವಸ್ಥಾನಗಳು, ಪವಿತ್ರ ವನಗಳು ಮತ್ತು ಪುರಾತತ್ವ ಇಲಾಖೆಯಿಂದ ಸಂರಕ್ಷಿತಗೊಂಡ ಜಿನ ಬಸದಿಯಂತಹ ಪ್ರದೇಶಗಳನ್ನು ತೋರಿಸಲಾಗಿಲ್ಲ. ಮುಂದುವರೆದು, ಸಂಭಾವ್ಯ ಭೂಕುಸಿತ ಪ್ರದೇಶಗಳು, ಸಿಂಗಳೀಕಗಳ ಆವಾಸಸ್ಥಾನ, ದೊಡ್ಡ ಮಂಗಟ್ಟೆ ಹಕ್ಕಿಗಳ ಗೂಡು ನಿರ್ಮಿಸುವ ಪ್ರದೇಶ, ಚಿಪ್ಪು ಹಂದಿಯ ಗುಹೆ, ಚಿರತೆ ವಾಸಸ್ಥಳಮುಂತಾದ ಪ್ರಮುಖ ವೈಜ್ಞಾನಿಕ ಸತ್ಯಗಳನ್ನು ಮತ್ತು ವಿವರಗಳನ್ನು ಮೌಲ್ಯಮಾಪನದಲ್ಲಿ ಉದ್ಧೇಶಪೂರ್ವಕವಾಗಿ ಮುಚ್ಚಿಡಲಾಗಿದೆ.
3. ನಿರ್ಮಾಣ ಸಾಮಾಗ್ರಿಗಳ ಕುರಿತಾಗಿ ಮುಚ್ಚಿಟ್ಟ ವಿವರಗಳು:
ಸುರಂಗ ಮಾರ್ಗ, ವಿದ್ಯುದಾಗಾರ ಹಾಗೂ ಭೂಗತ ವಿದ್ಯುತ್ ಕೇಂದ್ರ ನಿರ್ಮಾಣಕ್ಕೆ ಬೇಕಾಗುವ ನಿರ್ಮಾಣ ಸಾಮಾಗ್ರಿಗಳ ವಿವರಗಳನ್ನು ಮಾತ್ರ ನೀಡಲಾಗಿದೆ. ರಸ್ತೆ, ಸೇತುವೆ, ಗುತ್ತಿಗೆದಾರರ ಕಚೇರಿ, ಕಾರ್ಮಿಕ ವಸತ ಗೃಹಗಳ ನಿರ್ಮಾಣಕ್ಕೆ ಅಗತ್ಯವಾದ ನಿರ್ಮಾಣ ಸಾಮಾಗ್ರಿಗಳ ಪ್ರಮಾಣವನ್ನು ಮುಚ್ಚಿಡಲಾಗಿದೆ. ನಿರ್ಮಾಣ ಸಾಮಾಗ್ರಿಗಳ ಪ್ರಮಾಣದ ಕುರಿತಾಗಿ ಅನುಚಿತವಾದ ಮತ್ತು ಅಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ. ಸಿಮೇಂಟ್, ಮರಳು, ಜಲ್ಲಿ ಇತ್ಯಾದಿಗಳ ಬಿಡಿ ವಿವರಗಳು ಇರುವುದಿಲ್ಲ.
4. ಅಪಾಯಕಾರಿ ಕೈಗಾರಿಕ ಸ್ಪೋಟಕಗಳ ಕುರಿತಾಗಿ ಮುಚ್ಚಿಟ್ಟಿರುವ ಮಾಹಿತಿಗಳು:
18000 ಟನ್ ಅಪಾಯಕಾರಿ ಕೈಗಾರಿಕಾ ಸ್ಪೋಟಕಗಳನ್ನು ಬಳಸಲು ಯೋಜನಾಕರ್ತರು ಫಾರಂ:1ರಲ್ಲಿ ದಾಖಲಿಸಿದ್ದು, ಇಷ್ಟು ಮಟ್ಟದ ಸ್ಪೋಟಕಗಳನ್ನು ಬಳಸುವ ವಿಷಯವನ್ನು ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಚರ್ಚಿಸಿರುವುದಿಲ್ಲ. ಇದು ನೇರವಾಗಿ “ಅಪಾಯಕಾರಿ ಮತ್ತು ಇತರೆ ತ್ಯಾಜ್ಯ”ಗಳ (Management & Transboundary Movement) ನಿಯಮ 2016ರ ಸ್ಪಷ್ಟ ಉಲ್ಲಂಘನೆಯಾಗಿದೆ. ಸುರಂಗ ನಿರ್ಮಿಸಲು ಸ್ಪೋಟಕಗಳನ್ನು ಬಳಸಲಾಗುತ್ತದೆ. ಸ್ಪೋಟಕ ಬೆರೆತ ವಿಷಭರಿತ ಲಕ್ಷಾಂತರ ಟನ್ಗಳಷ್ಟು ತ್ಯಾಜ್ಯ ಇದರಿಂದ ಸೃಷ್ಟಿಯಾಗಲಿದೆ. ಇಷ್ಟು ಪ್ರಮಾಣದ ತ್ಯಾಜ್ಯವನ್ನು ನಿರ್ವಹಣೆ ಮಾಡುವ ವಿಧಾನ, ವಿಲೇವಾರಿ ವಿಧಾನವನ್ನು ಮುಚ್ಚಿಡಲಾಗಿದೆ. ಇಷ್ಟು ಪ್ರಮಾಣದ ವಿಷ ತ್ಯಾಜ್ಯ ಶರಾವತಿ ನದಿ, ಅಂತರ್ಜಲ ಮತ್ತು ತೊರೆಗಳಿಗೆ ಸೇರಿ ವಿಷವಾಗುವುದರ ಮೂಲಕ ಜಲಚರಗಳಿಗೆ, ಕೃಷಿ ಕ್ಷೇತ್ರಕ್ಕೆ, ಕುಡಿಯುವ ನೀರಿನ ಮೂಲಕ್ಕೆ ಮತ್ತು ಒಟ್ಟಾರೆಯಾಗಿ ಸಾರ್ವಜನಿಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಮುಚ್ಚಿಡಲಾಗಿದೆ.
5. ಶರಾವತಿ ನದಿಯಲ್ಲಿ ನಡೆಸುವ ಮರಳು ಗಣಿಗಾರಿಕೆ ಕುರಿತು ಮಾಹಿತಿ ನೀಡಲು ವಿಫಲ:
ಇಡೀ ಯೋಜನೆಯಲ್ಲಿ ಮರಳು ಗಣಿಗಾರಿಕೆ ಅತಿ ಹೆಚ್ಚು ಅಪಾಯಕಾರಿ ಮತ್ತು ವಿನಾಶಕಾರಿಯಾಗಿದೆ. ಉದ್ದೇಶಿತ ಮರಳು ಗಣಿಗಾರಿಕೆ ಪ್ರದೇಶವು ಶರಾವತಿ ಸಿಂಗಳೀಕ ಅಭಯಾರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತಿದ್ದು, ಈ ಪ್ರದೇಶವನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ. ಇದು ಪರಿಸರ ಸೂಕ್ಷ್ಮ ಪ್ರದೇಶ ನಿಯಮ 16ನೇ ನವಂಬರ್ 2023ರ ಸ್ಪಷ್ಟ ಉಲ್ಲಂಘನೆಯಾಗಲಿದೆ. ಕಡ್ಡಾಯವಾಗಿ ಪಾಲಿಸಬೇಕಾದ ಅನೇಕ ಕಾನೂನು/ನಿಯಮಗಳನ್ನು ಪಾಲಿಸಲಾಗಿಲ್ಲ. ಡಿಸ್ಟ್ರಿಕ್ಟ್ ಸರ್ವೆ ರಿಪೋರ್ಟ್, ಸುಸ್ಥಿರ ಮರಳು ಗಣಿಗಾರಿಕೆ ನಿರ್ವಹಣಾ ಮಾರ್ಗಸೂಚಿ 2016 ಮುಂತಾದವುಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಅಥವಾ ಮುಚ್ಚಿಡಲಾಗಿದೆ. ಒಂದು ದಿನದಲ್ಲಿ ಎಷ್ಟು ಪ್ರಮಾಣದ ಮರಳು ಗಣಿಗಾರಿಕೆ ನಡೆಸಲಾಗುವುದು ಎಂಬುದನ್ನು ಎಲ್ಲೂ ಉಲ್ಲೇಖಿಸಿಲ್ಲ. ನಿಶ್ಚಿತವಾಗಿ ಯೋಜನೆಗೆ ಅಗತ್ಯವಿರುವಷ್ಟು ಮರಳನ್ನು ಶರಾವತಿ ನದಿಯಿಂದ ಎತ್ತಿದರೆ, ಜಲಚರ, ಶರಾವತಿ ನದಿಯನ್ನು ನಂಬಿಕೊಂಡವರ ಬದುಕು ನಾಶವಾಗಲಿದೆ. ಜೊತೆಗೆ ನದಿ ಹರಿವಿನ ಪಥ ಬದಲಾಗಲಿದೆ. ಕೈಗಾರಿಕ ಸ್ಪೋಟಕಗಳನ್ನು ಬಳಸುವುದರಿಂದಾಗಿ ಇಡೀ ನದಿ ವಿಷದ ಮಡುವಾಗಲಿದೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 12ರ ಕುರಿತು ಬಿಗ್ ಅಪ್ಡೇಟ್
6. ಭೂಕುಸಿತದ ಕುರಿತು ಅಧ್ಯಯನ ಮಾಡದಿರುವುದು ಪರಿಸರ ಪರಿಣಾಮ ಮೌಲ್ಯಮಾಪನದ ವೈಫಲ್ಯವಾಗಿದೆ:
ಯೋಜನಾ ಪ್ರದೇಶವು ಮಧ್ಯಮದಿಂದ ಅತಿಹೆಚ್ಚು ಭೂಕುಸಿತದ ಅಪಾಯ ವಲಯದಲ್ಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವು ಸ್ಪಷ್ಟವಾಗಿ ಹೇಳಿದೆ. ಈ ಕುರಿತಾಗಿ ಮೌಲ್ಯಮಾಪನದಲ್ಲಿ ಕನಿಷ್ಟ ಉಲ್ಲೇಖವಿಲ್ಲ. ಗುಡ್ಡಗಾಡುಗಳಿಂದ ಆವರಿಸಿರುವ ಯೋಜನಾ ಪ್ರದೇಶದಲ್ಲಿ ದೊಡ್ಡ ಮಟ್ಟದ ಕೊರೆತ, ಸುರಂಗ ನಿರ್ಮಾಣ ಮಾಡುವುದು ಅಲ್ಲಿನ ಭೌಗೋಳಿಕ ಭದ್ರತೆಗೆ ಅಪಾಯ ಉಂಟು ಮಾಡಲಿದೆ. ಜನರ, ವನ್ಯಜೀವಿಗಳ, ಅರಣ್ಯ ಪ್ರದೇಶಗಳ ಪತನಕ್ಕೆ ಕಾರಣವಾಗಲಿದೆ. ಒಂದೊಮ್ಮೆ ಗುಡ್ಡ ಕುಸಿತವಾದಲ್ಲಿ ಇದು, ದೇವರ ಇಚ್ಛೆ ಎನ್ನುವ ಬದಲು ಕೆಪಿಸಿಎಲ್ ಸಂಸ್ಥೆಯ ಉದ್ದೇಶಪೂರ್ವಕ ಕ್ರಿಯೆ ಎಂದು ಹೇಳಬೇಕಾಗುತ್ತದೆ.
7. ಗುಡ್ಡ ಕೊರೆತ ಮತ್ತು ಸ್ಪೋಟ ಕ್ರಿಯೆಗಳ ಕುರಿತು ಮಾಹಿತಿ ಕೊರತೆ ಮತ್ತು ವೈಫಲ್ಯ:
ಗುಡ್ಡ ಕೊರೆತ ಮತ್ತು ಸುರಂಗ ನಿರ್ಮಾಣಗಳಿಂದ ಆಗಬಹುದಾದ ಹಾನಿಯನ್ನು ಗುರುತಿಸಲು ಪರಿಸರ ಪರಿಣಾಮ ಮೌಲ್ಯಮಾಪನ ವಿಫಲವಾಗಿದೆ. ಪ್ರತಿ ಬಾರಿ ಸ್ಫೋಟ ಮಾಡಿದಾಗಲೂ ಅದರ ಪರಿಣಾಮ ಸೂಕ್ಷ್ಮ ಗುಡ್ಡಗಳ ಮೇಲೆ ಆಗುತ್ತದೆ. ಇದು ನೀರಿನ ಹರಿವಿನ ಮೇಲೆ ಪರಿಣಾಮ ಬೀರುವುದಲ್ಲದೇ ಹತ್ತಿರದ ಹಳ್ಳಿಗಳ ವಾಸದ ಮನೆ, ಇಳಿಜಾರು ಪ್ರದೇಶವನ್ನು ಶಿಥಿಲಗೊಳಿಸುತ್ತದೆ. ಜೊತೆಗೆ ಅಂತರ್ಜಲ ಹರಿವಿನ ಮೇಲೆ ಪರಿಣಾಮ ಬೀರಲಿದೆ. ಪ್ರತ್ಯಕ್ಷವಾಗಿ ಅಭಯಾರಣ್ಯದ ಹಸಿರು ಕವಚದ ಮೇಲೆ ಪರಿಣಾಮ ಬೀರುವ ಮೂಲಕ, ಸಿಂಗಳೀಕ, ಚಿಪ್ಪುಹಂದಿ, ಕಾಳಿಂಗ ಮತ್ತು ಇನ್ನಿತರ ಸೂಕ್ಷ್ಮ ಜೀವಿವೈವಿಧ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಈ ಸ್ಪೋಟದಿಂದಾಗಿ ಹತ್ತಿರದ ಗೇರುಸೊಪ್ಪ ಅಣೆಕಟ್ಟು ಅಪಾಯಕ್ಕೆ ಸಿಲುಕಲಿದೆ. ಈ ಕುರಿತು ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಯಾವುದೇ ಉಲ್ಲೇಖ ಇರುವುದಿಲ್ಲ. ಸ್ಥಳೀಯ ನೀರಿನ ಮೂಲಗಳಾದ ಬೆಗೋಡಿ ಹಳ್ಳ ಮತ್ತು ಕಲ್ಕಟ್ಟೆ ಹೊಳೆಗಳು ಸ್ಥಳೀಯ ಜನರಿಗೆ ನೀರಿನ ಮೂಲವಾಗಿದ್ದು,ಇಡೀ ವರ್ಷ ನೀರನ್ನು ಉಣಿಸುತ್ತವೆ. ಇದು ಈ ಭಾಗದ ಕುಡಿಯುವ ನೀರಿನ ಭದ್ರತೆಯ ಮೂಲವಾಗಿದ್ದು, ಸ್ಪೋಟದಿಂದ ಈ ಹೊಳೆಗಳಲ್ಲಿ ನೀರಿನ ಹರಿವು ಕಡಿಮೆಯಾಗಬಹುದು ಅಥವಾ ಶಾಶ್ವಗತವಾಗಿ ನಿಂತು ಹೋಗಬಹುದು. ಇದನ್ನು ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಉಲ್ಲೇಖಿಸಲಾಗಿಲ್ಲ.
8. ಕಾನೂನುಬದ್ಧವಾಗಿ ಸಂರಕ್ಷಿತಗೊಂಡ ಸ್ಮಾರಕಗಳ ಕುರಿತು ನಿರ್ಲಕ್ಷ್ಯ:
ಯೋಜನಾ ಪ್ರದೇಶದಲ್ಲಿ ಯಾವುದೇ ಸ್ಮಾರಕಗಳು ಉಪಸ್ಥಿತಿ ಇರುವುದನ್ನು ಉಲ್ಲೇಖ ಮಾಡಲಾಗಿಲ್ಲ. ನಗರಬಸದಿ, ಗೇರುಸೊಪ್ಪಾ ಬಸದಿ, ಚತುರ್ಮುಖ ಬಸದಿಗಳ ಜೊತೆಯಲ್ಲಿ ವರ್ಧಮಾನ ಸ್ವಾಮಿ ದೇವಸ್ಥಾನ ಮತ್ತು ವೀರಭದ್ರ ದೇವಸ್ಥಾನಗಳಿವೆ. ಇದರಲ್ಲಿ ಚತುರ್ಮುಖ ಬಸದಿಯು ಪುರಾತತ್ವ ಕಾಯ್ದೆಯ ಅಡಿಯಲ್ಲಿ ಸಂರಕ್ಷಿತಗೊಂಡಿವೆ. ಕಾಯ್ದೆಯ ಪ್ರಕಾರ ಕಾನೂನಾತ್ಮಕವಾಗಿ ಸಂರಕ್ಷಿತಗೊಂಡ ಸ್ಮಾರಕದಿಂದ 100 ಮೀಟರ್ ಸುತ್ತಳತೆ ಪ್ರದೇಶವು ನಿಷೇದಿತ ಪ್ರದೇಶವಾಗಿರುತ್ತದೆ ಮತ್ತು 300 ಮೀಟರ್ ನಿಯಂತ್ರಿತ ಪ್ರದೇಶದಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಮಾಡುವ ಹಾಗಿಲ್ಲ. ನಿಷೇಧಿತ ಹಾಗೂ ನಿಯಂತ್ರಿತ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ಮಾಡುವುದಿದ್ದಲ್ಲಿ ಪುರಾತನ ಸ್ಮಾರಕಗಳು ಮತ್ತು ಪುರಾತತ್ವ ಪ್ರದೇಶಗಳ ಕಾಯ್ದೆ 1958 (ತಿದ್ದುಪಡಿ 2010) ಪ್ರಕಾರ ನಿರಾಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಇಂತಹ ಧರ್ಮ ವಿರೋಧಿ ವಿಷಯವನ್ನು ವರದಿಯಲ್ಲಿ ಕೈಬಿಡಲಾಗಿದೆ. ಇದನ್ನು ನಿರ್ಲಕ್ಷ್ಯ ಮಾಡಿ ಅಥವಾ ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವುದು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
9. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸೂಚನೆಯಂತೆ ರಸ್ತೆ ವಿನ್ಯಾಸ ಷರತ್ತು ಹಾಗೂ ರಸ್ತೆ ನಿರ್ಮಾಣದಿಂದಾಗುವ ಪರಿಸರ ಪರಿಣಾಮಗಳ ಕುರಿತ ವೈಫಲ್ಯ:
ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಉನ್ನತ ಸಮಿತಿಯು 24ನೇ ಜೂನ್ 2025ರ 84ನೇ ಸಭೆಯಲ್ಲಿ ನಗರಬಸ್ತಿಕೇರಿಯಿಂದ ಬೆಗೋಡಿಯವರೆಗೆ ಮತ್ತು ವಿದ್ಯುದಾಗಾರದವರೆಗೆ ನಿರ್ಮಿಸಲಿರುವ ರಸ್ತೆಯನ್ನು ಸುರಂಗ ಮಾರ್ಗದಲ್ಲಿ ನಿರ್ಮಿಸಲು ಸಲಹೆ ನೀಡಿತ್ತು. ಕಾನೂನಾತ್ಮಕವಾದ ಈ ಸಲಹೆಯನ್ನು ವರದಿಯಲ್ಲಿ ಪರಿಗಣಿಸಲಾಗಿಲ್ಲ. ಜೊತೆಗೆ ಉದ್ಧೇಶಿತ ರಸ್ತೆಯು ಬೆಗೋಡಿಹಳ್ಳದ ಸಮಾನಾಂತರವಾಗಿ ನಿರ್ಮಾಣಗೊಳ್ಳುತ್ತಿದ್ದು, ಇದು ಬೇಸಿಗೆಯಲ್ಲಿ ಹಳ್ಳದ ಮತ್ತು ಅದಕ್ಕೆ ಬಂದು ಸೇರುವ ತೊರೆಗಳಿಗೆ ಅಡ್ಡಿಯಾಗಲಿದೆ ಹಾಗೂ ಮಳೆಗಾಲದಲ್ಲಿ ಹಳ್ಳವು ಉಕ್ಕಿ ಹರಿಯುವುದರಿಂದಾಗಿ ರಸ್ತೆಯು ಸಾಗಾಣಿಕೆಗೆ ಯೋಗ್ಯವೂ ಆಗುವುದಿಲ್ಲ. ಈ ಅಂಶಗಳನ್ನು ಗಮನಿಸಿದೇ ಅಥವಾ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಕಾಂಕ್ರೀಟ್ ರಸ್ತೆ ನಿರ್ಮಿಸುವುದರಿಂದ, ಹಳ್ಳದ ಹರಿವಿನ ಮೇಲೆ ಶಾಶ್ವತ ಅಡ್ಡ ಪರಿಣಾಮ ಬೀರಲಿದೆ. ಹಾಗೂ ರಸ್ತೆಯು ರಾಷ್ಟ್ರೀಯ ಸ್ಮಾರಕಗಳ ನಿಷೇಧಿತ ಪ್ರದೇಶದಲ್ಲೂ ಹಾದು ಹೋಗುತ್ತಿದ್ದು, ರಾಷ್ಟ್ರೀಯ ಸ್ಮಾರಕ ನೀತಿ/ನಿಯಮಗಳನ್ನು ಉಲ್ಲಂಘಿಸಲಿದೆ.
ಇದನ್ನೂ ಓದಿ: ಹುಟ್ಟೂರು ಶೃಂಗೇರಿಯನ್ನ ಕೊಂಡಾಡಿದ ವಜ್ರಕಾಯ ಬೆಡಗಿ; ನಾನು ಶೃಂಗೇರಿಯವಳು ಎನ್ನಲು ಈ ಕಾರಣಕ್ಕೆ ಹೆಮ್ಮೆ ನಭಾ ನಟೇಶ್..
10. ಪರಿಸರ ಸೂಕ್ಷ್ಮ ಪ್ರದೇಶ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಹಾಗೂ ತ್ಯಾಜ್ಯ ವಿಲೇವಾರಿ ಕುರಿತಾದ ವೈಫಲ್ಯ:
ವರದಿಯ ಚಿತ್ರ 4.2ರಲ್ಲಿ ತೋರಿಸಿರುವಂತೆ, ತ್ಯಾಜ್ಯ ವಿಲೇವಾರಿ ಪ್ರದೇಶದ ಗಡಿಯು ಅಭಯಾರಣ್ಯದ ಪರಿಧಿಯಲ್ಲಿ ಬರುತ್ತದೆಯೋ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತಿದೆಯೋ ಅಥವಾ ಶರಾವತಿ ನದಿ ಪಾತ್ರದಲ್ಲಿ ಬರುತ್ತಿದೆಯೋ ಎಂದು ಸ್ಪಷ್ಟವಾಗಿ ಗಡಿ ಗುರುತಿಸುವ ಪ್ರಕ್ರಿಯೆ ನಡೆಸಿರುವುದಿಲ್ಲ. ಇದರಿಂದ ತ್ಯಾಜ್ಯ ವಿಲೇವಾರಿಯಿಂದಾಗಿ ಪರಿಸರದ ಮೇಲಾಗುವ ಪರಿಣಾಮಗಳನ್ನು ನಾಗರಿಕರಾಗಲೀ ಅಥವಾ ಸರ್ಕಾರದ ಇತರೆ ಇಲಾಖೆಗಳಿಗಾಗಲೀ ಲೆಕ್ಕ ಹಾಕಲು ಸಾಧ್ಯವಿರುವುದಿಲ್ಲ. ಮುಂದುವರೆದು, 18 ಸಾವಿರ ಟನ್ ಕೈಗಾರಿಕ ಸ್ಪೋಟಕಗಳನ್ನು ಬಳಸಿಕೊಂಡು ಕೊರೆಯಲಾಗುವ ಸುರಂಗಗಳಿಂದ ಉತ್ಪತ್ತಿಯಾಗುವ ವಿಷಕಾರಿ ತ್ಯಾಜ್ಯದ ಪ್ರಮಾಣ ಸುಮಾರು 12 ದಶಲಕ್ಷ ಟನ್ಗಳು!! ಇಷ್ಟು ಪ್ರಮಾಣದ ತ್ಯಾಜ್ಯವನ್ನು ಶರಾವತಿ ನದಿಯಿಂದ ಬರೀ 124 ಮೀಟರ್ ದೂರದಲ್ಲಿ ಹಾಕಲಾಗುತ್ತದೆ. ಇದರಿಂದಾಗುವ ಸಮಗ್ರ ಪರಿಣಾಮಗಳನ್ನು ಅಧ್ಯಯನ ನಡೆಸಿರುವುದಿಲ್ಲ. ವಿಷಕಾರಿ ತ್ಯಾಜ್ಯವನ್ನು ಗೇರುಸೊಪ್ಪಾ ಅಣೆಕಟ್ಟಿನ ಮೇಲು ಭಾಗದಲ್ಲೂ ಸುರಿಯುವ ಯೋಜನೆಯಿದ್ದು, ಇದರಿಂದ, ಮಳೆಗಾಲದಲ್ಲಿ ತ್ಯಾಜ್ಯವು ಅಣೆಕಟ್ಟಿಗೆ ಹರಿದು ಅದರ ಸಂಗ್ರಹಣಾ ಸಾಮರ್ಥ್ಯವನ್ನು ಕಡಿಮೆ ಮಾಡಲಿದೆ. ಜಲವಿದ್ಯುತ್ ಯೋಜನೆಗಳಿಗೆ ಕರಾಳ ಇತಿಹಾಸವಿದೆ. ಕಾನೂನು ಬಾಹಿರವಾಗಿ ಮತ್ತು ಅವೈಜ್ಞಾನಿಕವಾಗಿ ತ್ಯಾಜ್ಯಗಳನ್ನು ಸುರಿಯುವ ಪರಿಪಾಠವಿದೆ. ಮಳೆಗಾಲದಲ್ಲಿ ತ್ಯಾಜ್ಯಗಳು ನದಿಗೆ ಸೇರಿ ನದಿ ಹರಿವಿನಲ್ಲಿ ವ್ಯತ್ಯಯವಾಗಿ ನೆರೆ ಬಂದ ಉದಾಹರಣೆಗಳಿವೆ. ಇದನ್ನು ಗಮನಿಸಿದ ಉತ್ತರಕಾಂಡ ಸರ್ವೊಚ್ಛ ನ್ಯಾಯಾಲಯವು 2018ರಲ್ಲಿ ಯೋಜನಾ ತ್ಯಾಜ್ಯಗಳನ್ನು ನದಿ ಹರಿವಿಗಿಂತ ಕನಿಷ್ಟ 500 ಮೀಟರ್ ದೂರದಲ್ಲಿ ಹಾಕಬೇಕು ಮತ್ತು ತ್ಯಾಜ್ಯ ಸುರಿಯುವ ಪ್ರದೇಶವನ್ನು ಸರ್ಕಾರ ಗುರುತಿಸುವವರೆಗೂ ಯಾವುದೇ ಕಾಮಗಾರಿಯನ್ನು ರಾಜ್ಯದಲ್ಲಿ ಮಾಡಬಾರದು ಎಂದು ಹೇಳಿತ್ತು. ಈ ಉಪಕ್ರಮವನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲೂ ಅನ್ವಯಿಸಬೇಕಾಗುತ್ತದೆ.
11. ಸಾಮುಚ್ಚಾಯಿಕ ಪರಿಣಾಮ ಹಾಗೂ ಧಾರಣಾ ಸಾಮರ್ಥ್ಯದ ಕುರಿತಾದ ಅಧ್ಯಯನದ ವೈಫಲ್ಯ:
2025ರ ಜುಲೈ 30ರಂದು ನಡೆದ 7ನೇಸಭೆಯಲ್ಲಿ ಅರಣ್ಯ ಸಲಹಾ ಸಮಿತಿ (FAC) ಬಳಕೆದಾರ ಸಂಸ್ಥೆಗೆ ಪರಿಸರ ಪರಿಣಾಮ ಮೌಲ್ಯಮಾಪನ (EIA) ವರದಿಯ ಅಂಗವಾಗಿ ಒಟ್ಟಾರೆ ಪರಿಣಾಮ ಮೌಲ್ಯಮಾಪನ (Cumulative Impact Assessment)ಮತ್ತು ಧಾರಣಾ ಸಾಮರ್ಥ್ಯ ಅಧ್ಯಯನ (Carrying Capacity Study)ಗಳನ್ನು ನಡೆಸಲು ಸ್ಪಷ್ಟ ಸೂಚನೆ ನೀಡಿತ್ತು. ಇವು ಕೇವಲ ತಾಂತ್ರಿಕ ಪ್ರಕ್ರಿಯೆಗಳು ಅಗಿರುವುದಿಲ್ಲ. ಈ ಮಹತ್ತರ ಯೋಜನೆ ಕಾನೂನುಬದ್ಧವಾಗಿ ರಕ್ಷಿತ ಹಾಗೂ ಪರಿಸರ ದೃಷ್ಟಿಯಿಂದ ಅತೀ ನಾಜೂಕಾದ ಪ್ರದೇಶದಲ್ಲಿರುವುದರಿಂದ ನಡಸಲೇಬೇಕಾದ ಅಗತ್ಯವಾದ ಅಧ್ಯಯನಗಳಾಗಿವೆ. ಆದರೆ, ಪರಿಸರ ಪರಿಣಾಮ ಮೌಲ್ಯಮಾಪನ ವರದಿಯಲ್ಲಿ ಈ ಎರಡು ಅಧ್ಯಯನಗಳಿಲ್ಲದಿರುವುದು, ಅರಣ್ಯ ಸಲಹಾ ಸಮಿತಿ ನಿರ್ದೇಶನಗಳ ನೇರ ಉಲ್ಲಂಘನೆ ಆಗಿರುತ್ತದೆ. ಇದು ಸಮಗ್ರ ನದಿ ತಟ ಮತ್ತು ಭೂದೃಶ್ಯ ಮಟ್ಟದ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವಲ್ಲಿ ವೈಫಲ್ಯವನ್ನೂ ತೋರಿಸುತ್ತದೆ. ಹೀಗಾಗಿ, ಈ ತಪ್ಪು ವರದಿಯನ್ನು ಅಪೂರ್ಣ ಮತ್ತು ಕಾನೂನುಬದ್ಧವಾಗಿ ಅಸಮರ್ಥನೀಯವೆಂದು ಪರಿಗಣಿಸಬೇಕಾಗಿದೆ.
12. ವಿದ್ಯುತ್ ಪ್ರಸರಣಮಾರ್ಗದ ಕುರಿತ ಮೌಲ್ಯಮಾಪನ ವೈಫಲ್ಯ:
2025 ರ ಜುಲೈ 30ರಂದು ನಡೆದ 7ನೇ ಸಭೆಯಲ್ಲಿ ಅರಣ್ಯ ಸಲಹಾ ಸಮಿತಿ (FAC) ಮತ್ತು 2025ರ ಜೂನ್ 26ರಂದು ನಡೆದ 84ನೇ ಸಭೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL)ಯ ಸ್ಥಾಯಿ ಸಮಿತಿ, ವಿದ್ಯುತ್ ಪ್ರಸರಣ ಘಟಕವನ್ನು ಯೋಜನೆಯ ಅವಿಭಾಜ್ಯ ಅಂಗವಾಗಿ ಪರಿಗಣಿಸಬೇಕೆಂದು ಸ್ಪಷ್ಟವಾಗಿ ಸೂಚಿಸಿವೆ. ಪರಿಸರ ಪರಿಣಾಮ ಮೌಲ್ಯಮಾಪನದ ನಿಯಮಾವಳಿ (Terms of Reference – ToR) ಸಹ ಪ್ರಸರಣ ಮಾರ್ಗಗಳ ಮೌಲ್ಯಮಾಪನವನ್ನು ಕಡ್ಡಾಯಗೊಳಿಸುತ್ತದೆ. ಆದಾಗ್ಯೂ, KPCL “ವಿದ್ಯುತ್ ಹೊರ ಹರಿವು ಮಾರ್ಗ ಈಗಾಗಲೇ ಅಸ್ತಿತ್ವದಲ್ಲಿದೆ” ಎಂಬ ತಪ್ಪು ಮತ್ತು ತಪ್ಪು ದಾರಿಗೆಳೆಯುವ ಹೇಳಿಕೆಯನ್ನು ನೀಡುತ್ತಿದೆ. ನಮ್ಮ ಸ್ವಂತ ವಿಶ್ಲೇಷಣೆ ಹಾಗೂ ಕೆಪಿಟಿಸಿಎಲ್ ಇಂಜಿನಿಯರ್ಗಳೊಂದಿಗೆ ನಡೆದ ತಾಂತ್ರಿಕ ಚರ್ಚೆಗಳು, ಹಾಲಿ ಪ್ರಸರಣ ಜಾಲವು ಸಂಪೂರ್ಣವಾಗಿ ಪರ್ಯಾಯ ಮಾದರಿಯಲ್ಲ ಎಂಬುದನ್ನು ದೃಢಪಡಿಸುತ್ತದೆ. ವಾಸ್ತವವಾಗಿ, ಹೊಸ 400 ಕೆ.ವಿ. ಡಬಲ್ ಸರ್ಕ್ಯೂಟ್ ದ್ವಿಪಾರ್ಶ್ವ ಪ್ರಸರಣ ಮಾರ್ಗವು ಅವಶ್ಯಕವಾಗಿದ್ದು, ಇದರ ಉದ್ದವು ಸುಮಾರು 60 ಕಿಮೀ ಆಗಿದ್ದು, 100 ಮೀಟರ್ ಅಗಲದ ಕಾರಿಡಾರ್ ಅಗತ್ಯವಿರುತ್ತದೆ. ಕೆಪಿಟಿಸಿಎಲ್ನಿಂದ ಪಡೆದ ಮಾಹಿತಿಯ ಹಕ್ಕು (RTI) ಉತ್ತರ ಪ್ರಕಾರ, ಈ ಪ್ರಸರಣ ಮಾರ್ಗಕ್ಕೆ ಕನಿಷ್ಠ 145 ಏಕರೆಗಳಷ್ಟು ಅಭಯಾರಣ್ಯ ಮತ್ತು ಅರಣ್ಯಭೂಮಿ ಬಳಸಬೇಕಾಗುತ್ತದೆ. ವಿದ್ಯುತ್ ಪ್ರಸರಣ ಮಾರ್ಗಗಳು ಪ್ರತ್ಯೇಕ ಅಥವಾ ಐಚ್ಛಿಕ ಅಂಶಗಳಲ್ಲ — ಅವು ಸುರಂಗಗಳು, ವಿದ್ಯುದಾಗಾರಗಳು ಮತ್ತು ಇತರ ಯೋಜನಾ ಘಟಕಗಳಂತೆಯೇ ಅವಿಭಾಜ್ಯ ಹಾಗೂ ಪರಸ್ಪರ ಅವಲಂಬಿತ ಅಂಶಗಳಾಗಿವೆ. ಅವುಗಳನ್ನುಕೆಪಿಸಿಎಲ್ ಅಥವಾ ಕೆಪಿಟಿಸಿಎಲ್ ಎಂಬ ವಿಭಿನ್ನ ಸಂಸ್ಥೆಗಳು ಜಾರಿಗೊಳಿಸಿದರೂ, ಅವುಗಳ ಪರಿಸರ ಪರಿಣಾಮಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುವುದು ಕಡ್ಡಾಯವಾಗಿದೆ. ಪ್ರಸರಣ ಮಾರ್ಗವನ್ನು ಹೊರತುಪಡಿಸಿ ಸಲ್ಲಿಸಲಾದ ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಅರಣ್ಯನಾಶ, ವನ್ಯಜೀವಿಗಳ ಆವಾಸಸ್ಥಾನದ ಛಿದ್ರವಾಗುವಿಕೆ ಹಾಗೂ ಪರಿಸರ ಹಾನಿಯ ಪ್ರಮುಖ ಅಂಶವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಹಾಕಿದ್ದು, ಇದರಿಂದ ವರದಿ ಅಪೂರ್ಣ ಮತ್ತು ತಪ್ಪು ಮಾಹಿತಿಯಿಂದ ಕೂಡಿದ್ದು ಮತ್ತು ಕಾನೂನುಬದ್ಧವಾಗಿ ಅಸಮರ್ಥನೀಯ ಆಗಿದೆ.
ಇದನ್ನೂ ಓದಿ: ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತು; ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
13. ಒಟ್ಟು ಆರು ವರ್ಷಗಳ ಕಾಲ ನಡೆಯಲಿರುವ ನಿರ್ಮಾಣ ಕಾಮಾಗರಿಯಲ್ಲಿ ತಾಂತ್ರಿಕ ಸಿಬ್ಬಂದಿಗಳು, ಕೂಲಿ ಕಾರ್ಮಿಕರು ಮತ್ತವರ ಕುಟುಂಬದ ಸಂಖ್ಯೆ ಸೇರಿ 3700ರನ್ನು ಮೀರಲಿದೆ. ಇವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತಾಗಿ ಸಮಗ್ರ ದೃಷ್ಟಿಕೋನವಿಲ್ಲ. ಕೆಲಸಗಾರರು ಎಲ್ಲಿಂದ ಬರುತ್ತಾರೆ ಎಂಬ ವಿವರಗಳಿಲ್ಲ. ಇಷ್ಟು ಸಂಖ್ಯೆಯ ಜನರಿಂದ ಪರಿಸರದ ಹಾಗೂ ಸ್ಥಳೀಯರ ಮೇಲಾಗುವ ದೌರ್ಜನ್ಯದ ವಿವರಗಳು ಮೌಲ್ಯಮಾಪನದಲ್ಲಿ ಸಿಗುವುದಿಲ್ಲ ಎಂಬುದು ಪರಿಸರಪ್ರೇಮಿಗಳ ಅಭಿಪ್ರಾಯವಾಗಿದೆ.












