ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಎರಡು ಗಂಟೆ ವೇಳೆ ಚಲಿಸುತ್ತಿದ್ದ ಲಾರಿಯೊಂದು ಏಕಾಏಕಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

ಜಾವಗಲ್ ನಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಚಾರ್ಮಾಡಿ ಘಾಟಿಯ ಎರಡನೇ ತಿರುವೊಂದರಲ್ಲಿ ಲಾರಿಯಿಂದ ಧಗಧಗಿಸಿ ಬೆಂಕಿ ಉರಿಯತೊಡಗಿದ್ದು, ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಲಾರಿ ಸುಟ್ಟು ಭಸ್ಮವಾಗಿದೆ.
ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳವೂ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಮತ್ತು ಕ್ಲೀನರ್ ಲಾರಿಯಿಂದ ಜಿಗಿದು ಒಟ್ಟು ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಲಾರಿಯಿಂದ ಹರಡಿದ ಬೆಂಕಿ ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶಕ್ಕೂ ತಗುಲಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಆಧಾರ್ ಸೇವಾ ಕೇಂದ್ರದಲ್ಲಿ ಜಾಬ್, ಅರ್ಜಿ ಆಹ್ವಾನ
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದು, ದೀರ್ಘ ಪ್ರಯತ್ನದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆಯಿಂದ ಚಿಕ್ಕಮಗಳೂರು–ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. (ವರದಿ – ತನು ಕೊಟ್ಟಿಗೆಹಾರ)












