ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅರ್ಭಟ ಮುಂದುವರಿದಿದ್ದು, ತುಂಗಾ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಶೃಂಗೇರಿಯ ಕೆರೆಕಟ್ಟೆ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ತುಂಗಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿಯ ನೀರು ರಸ್ತೆಯ ಮಟ್ಟಕ್ಕೆ ತಲುಪಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್!; ಕೃಷಿ ಉಪಕರಣ ಖರೀದಿಗೆ 50% ಸಬ್ಸಿಡಿ

ಮಲೆನಾಡಿನ ನದಿಪಾತ್ರದ ಹೊಲ, ಗದ್ದೆ, ಮತ್ತು ತೋಟಗಳಿಗೆ ಕೆಲವೆಡೆ ನೀರು ನುಗಿದ್ದು, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಅತಿ ಹೆಚ್ಚು ವರ್ಷಧಾರೆಯಾಗಿದೆ. ಹಾಗಾಗಿ ತುಂಗಾ ನದಿಯ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ. ಅತಿಯಾದ ಮಳೆಯಿಂದ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಜನರಿ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಶೃಂಗೇರಿ ತಾಲೂಕಿನಲ್ಲಿ ಭಾನುವಾರ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ತುಂಗೆಯ ಹರಿವು ಹೆಚ್ಚಾಗಿ ಪಟ್ಟಣದ ಪರ್ಯಾಯ ರಸ್ತೆ, ಗಾಂಧಿ ಮೈದಾನ ರಸ್ತೆ ಜಲಾವೃತಗೊಂಡಿವೆ. ಅಲ್ಲಿರುವ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮೆಣಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಸಮೀಪ ಗುಡ್ಡ ಕುಸಿದಿದೆ. ಕೊಚ್ಚವಳ್ಳಿ ಸಮೀಪದ ತೋಟಕ್ಕೆ ನೀರು ನುಗ್ಗಿದೆ. ಭಾರಿ ಮಳೆಯಿಂದಾಗಿ ನದಿ ಸಮೀಪ ಜನರು ತೆರಳದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ತೆಕ್ಕೂರೂ ಗ್ರಾಮ ಪಂಚಾಯಿತಿಯ ಬೋಳೂರ ಶರತ್ ಅವರ ಮನೆ ಹತ್ತಿರ ರೋಡ್ ಮೇಲೆ ಮರ ಹಾಗೂ ಗುಡ್ಡ ಕುಸಿದು. ರಸ್ತೆ ಸಂಪೂರ್ಣ ಬಂದ್ ಆಗಿದೆ.
ಇದನ್ನೂ ಓದಿ: ರೈಲ್ವೆ NTPC ಗ್ರಾಜುವೇಟ್ ನೇಮಕಾತಿ; 30,307 ಹುದ್ದೆಗೆ ಅರ್ಜಿ ಆಹ್ವಾನ
ಮೈದುಂಬಿ ಹರಿದ ಭದ್ರಾ ನದಿ:
ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಹೋಬಳಿಯ ವಿವಿಧೆಡೆ ಮಘೆ ಮಳೆ ರುಸುಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾನುವಾರ ಮಘೆ ಮಳೆ ಆರಂಭಗೊಂಡಿದ್ದು ಮೊದಲ ದಿನವೇ ಬಿರುಸಿನ ಮಳೆಯಾಗಿದೆ. ಇದೀಗ ಮಘೆ ಮಳೆಯು ಮೊದಲ ದಿನವೇ ಬಿಟ್ಟು ಬಿಡದೆ ಸುರಿದಿದ್ದರಿಂದ ಭದ್ರಾ ನದಿಯು ಮೈದುಂಬಿ ಹರಿಯುತ್ತಿದೆ. ನೀರಿನ ಹರಿವು ಅಪಾಯದಮಟ್ಟ ಮೀರಿದ್ದು ನದಿಯ ಪಾತ್ರದ ಕೆಲವು ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಹಲವು ಕಡೆಗಳಲ್ಲಿ ಕೆಲವು ದಿನಗಳ ಹಿಂದಷ್ಟೆ ನಾಟಿ ಮಾಡಿದ್ದ ಭತ್ತದ ಸಸಿಗಳು ಭದ್ರಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿವೆ. ಭದ್ರಾ ನದಿಯ ಸುತ್ತಮುತ್ತಲೂ ಇರುವ ಸಣ್ಣಪುಟ್ಟ ಹಳ್ಳಗಳೂ ತುಂಬಿ ಹರಿಯುತ್ತಿವೆ. ಭಾರಿ ಮಳೆಯೊಂದಿಗೆ ಕೆಲವೊಮ್ಮೆ ಗಾಳಿಯೂ ಬೀಸುತ್ತಿದ್ದು ಕೆಲವು ಕಡೆಗಳಲ್ಲಿ ಮರಗಳು ಬಿದ್ದಿವೆ.
ಮುಳುಗಿದ ಹೆಬ್ಬಾಳೆಯ ಹಳೇ ಸೇತುವೆ
ಕಳಸ ತಾಲೂಕಿನಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿ ಪಾತ್ರಗಳು ಜಲಾವೃತವಾಗಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಶನಿವಾರ ಸಂಜೆಯಿಂದ ಮಳೆಯ ಬಿರುಸು ಹೆಚ್ಚಾಗಿದ್ದು ರಾತ್ರಿ ವೇಳೆ ಗುಡುಗಿನೊಂದಿಗೆ ಮಳೆ ಸುರಿದಿದೆ. ಹೆಬ್ಬಾಳೆಯ ಹಳೇ ಸೇತುವೆ ಮುಳುಗಡೆಯಾಗಿ ನದಿ ಪಾತ್ರಗಳು ಜಲಾವೃತವಾಗಿವೆ. ನದಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟದ ನೀರು ಹರಿದಿದೆ.












