ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಮೆಡಿಕಲ್ ಮಾಲೀಕರಿಗೆ ಕೋಟ್ಯಂತರ ರೂ. ವಂಚಿಸಿದ ನಕಲಿ ಐಎಎಸ್ ಅಧಿಕಾರಿ ಮಿಥುನ್ ಚಕ್ರವರ್ತಿಯ ವಂಚನೆಯ ಒಂದೊಂದೇ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೇವಲ ಉದ್ಯಮಿಗಳಷ್ಟೇ ಅಲ್ಲದೆ ವಕೀಲರಿಗೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಹೌಸಿಂಗ್ ಬೋರ್ಡ್ ನಿವಾಸಿ ಹಾಗೂ ಹಿರಿಯ ವಕೀಲ ಸುನಿಲ್‌ಕುಮಾರ್ ಅವರಿಂದ ಹಣ ಪಡೆದು ವಂಚಿಸಿದ್ದಾನೆ. ಐದು ತಿಂಗಳ ಹಿಂದೆ ಮೇಘನಾ ಎಂಬಾಕೆ ಪರಿಚಯವಾಗಿದ್ದು, ಸಿವಿಲ್ ಪ್ರಕರಣ ಸಂಬಂಧ ವಕೀಲರ ಕಚೇರಿಗೆ ಬಂದಿದ್ದ ಮೇಘನ, ತನ್ನ ಜೊತೆಯಲ್ಲಿ ಮಿಥುನ್ ಸಿ.ಆರ್. ಎಂಬಾತನನ್ನು ಕರೆ ತಂದಿದ್ದರು. ಈತ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದಾನೆ ಎಂದು ಸುಳ್ಳು ಹೇಳಿ ಪರಿಚಯಿಸಿದ್ದಳು.

ತಾನು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಅಸಿಸ್ಟೆಂಟ್ ಕಮಿಶನರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿ ವಕೀಲರ ಮುಂದೆ ನಕಲಿ ಐಡಿ ಕಾರ್ಡ್, ಸುಳ್ಳು ಸ್ಯಾಲರಿ ಸರ್ಟಿಫಿಕೇಟ್ ಹಾಗೂ ತರಬೇತಿಗೆ ಹಾಜರಾಗುವಂತೆ ಸರಕಾರದಿಂದ ಬಂದಿರುವಂತೆ ಸೃಷ್ಟಿಸಲಾಗಿದ್ದ ನಕಲಿ ಪತ್ರಗಳನ್ನು ತೋರಿಸಿ ವಕೀಲನ ವಿಶ್ವಾಸ ಗಳಿಸಿದ್ದಾನೆ.


ಇದನ್ನೇ ಬಂಡವಾಳ ಮಾಡಿಕೊಂಡು ಮನೆ ಕಟ್ಟುವ ನೆಪ ಹಾಗೂ ತುರ್ತು ಆರ್ಥಿಕ ಅಗತ್ಯಗಳ ಹೇಳಿಕೊಂಡು ವಿಥುನ್ ಮತ್ತು ಮೇಘನ ವಕೀಲ ಸುನಿಲ್‌ಕುಮಾರ್ ಅವರಿಂದ ಹಂತ ಹಂತವಾಗಿ 3,35,000 ರೂ. ಹಣ ಪಡೆದಿದ್ದಾನೆ. ಅಷ್ಟೇ ಅಲ್ಲದೆ ವಕೀಲರ ಮೂಲಕ ಸ್ನೇಹಿತರಿಂದಲೂ 65 ಸಾವಿರ ರೂ. ಪಡೆದಿದ್ದಾನೆ.
ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಥುನ್ ನಕಲಿ ಐಎಎಸ್ ಅಧಿಕಾರಿ ಎಂಬ ಕಾರಣಕ್ಕೆ ಸಿಕ್ಕಿಬಿದ್ದಾಗ ಆತನ ಅಸಲಿ ಬಣ್ಣ ಬಯಲಾಗಿದೆ. ಸದ್ಯ ವಕೀಲರ ದೂರಿನ ಮೇರೆಗೆ ಮೇಘನ ಹಾಗೂ ಮಿಥುನ್ ಸಿ.ಆರ್. ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













