ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಲಿಂಗದಹಳ್ಳಿ ಹೋಬಳಿಯ ಪತ್ರಕರ್ತ ಎನ್.ಎಸ್. ಪರಮೇಶ್ವರಪ್ಪ ಅವರು ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಶುಕ್ರವಾರ ಸಂಜೆ ನಂದಿಬಟ್ಟಲು ಗ್ರಾಮದ ಸಮೀಪ ನಡೆದಿದೆ.
ಪರಮೇಶ್ವರಪ್ಪ ಅವರು ತಮ್ಮ ಸ್ವಗ್ರಾಮ ಜಯಪುರಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ನಂದಿಬಟ್ಟಲು ಗ್ರಾಮದ ಸಮೀಪ ರಸ್ತೆಯಲ್ಲಿ ಕಾಡಾನೆಯೊಂದು ಎದುರಾಗಿದೆ. ಏಕಾಏಕಿ ಆನೆ ಅವರತ್ತ ದಾಳಿಗೆ ಮುಂದಾದಾಗ ಬೈಕ್ನಿಂದ ಕೆಳಗಿಳಿದು ಸುಮಾರು 10 ಅಡಿ ದೂರದಲ್ಲಿದ್ದ ಪೊದೆಯೊಳಗೆ ಹಾರಿ ಅವಿತುಕೊಂಡಿದ್ದಾರೆ.
ಪರಮೇಶ್ವರಪ್ಪ ಅವರು ತಪ್ಪಿಸಿಕೊಂಡ ಬಳಿಕ ಆನೆ ಬೈಕ್ ಮೇಲೆ ದಾಳಿ ನಡೆಸಿ ಅದನ್ನು ಎತ್ತಿ ನೆಲಕ್ಕೆ ಬಡಿದು ಸಂಪೂರ್ಣ ನುಜ್ಜುಗುಜ್ಜು ಮಾಡಿದೆ. ಆನೆ ಸ್ಥಳದಿಂದ ತೆರಳಿದ ನಂತರ ಘಟನೆ ಕುರಿತು ವಲಯ ಅರಣ್ಯಾಧಿಕಾರಿ ಬಿ. ಸುಧಾಕರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಕಾಡಾನೆ ದಾಳಿಯಿಂದ ಪರಮೇಶ್ವರಪ್ಪ ಅವರ ಬೈಕ್ ಸಂಪೂರ್ಣ ಜಖಂಗೊಂಡಿದೆ.
ತರೀಕೆರೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪತ್ರಕರ್ತ ಪಾರು; ಬೈಕ್ ನುಜ್ಜುಗುಜ್ಜು













